ADVERTISEMENT

ಅಸಮರ್ಪಕ ನೀರು ಪೂರೈಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ರಾಮನಗರ:ಅಸಮರ್ಪಕ ನೀರು ಸರಬರಾಜು, ನೈರ್ಮಲ್ಯ ಸಮಸ್ಯೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ನಗರಸಭೆ ಆವರಣದ ಮುಂಭಾಗದಲ್ಲಿ ಸೋಮವಾರ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ 1ರಿಂದ 12ನೇ ವಾರ್ಡ್‌ವರೆಗಿನ ನಿವಾಸಿಗಳಿಗೆ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.ಅಲ್ಲದೆ ಈ ನೀರು ಬಹುತೇಕ ಕಲುಷಿತಗೊಂಡಿದ್ದು, ನಾಗರಿಕರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆ ಕಾಲ ಆರಂಭವಾಗುತ್ತಿದ್ದು ನಗರದ ಜನತೆಗೆ ಸಮರ್ಪಕ ನೀರು ಸರಬರಾಜು ಮಾಡಲು ನಗರಸಭೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ನಾಗರಾಜು ಮಾತನಾಡಿ, 15 ವರ್ಷಗಳಿಂದ ನಗರದ 1ರಿಂದ 12 ವಾರ್ಡ್‌ಗಳ ಜನತೆಗೆ ನೀರಿನ ಸಮಸ್ಯೆ ಇದೆ. ಉಳಿದ ವಾರ್ಡ್‌ಗಳಲ್ಲಿ ಸಮರ್ಪಕ ನೀರು ಪೂರೈಸುವ ನಗರಸಭೆ ಈ ಪ್ರದೇಶಗಳಲ್ಲಿಯೂ ಇದೇ ರೀತಿ ನೀರು ಸರಬರಾಜು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

‘ನೀರಿನ ಬವಣೆ ಕುರಿತು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರ ಗಮನ ಸೆಳೆಯಲು ಪ್ರತಿಭಟನೆ ನಡೆಸಿದರೆ,ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಪ್ರತಿಭಟನಾಕಾರರ ಮೇಲೆ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಅವರು ಎಚ್ಚರಿಸಿದರು.

ನಗರದ ಇತರ ವಾರ್ಡ್‌ಗಳಿಗೆ ಹೇಗೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆಯೋ ಅದೇ ರೀತಿ 1ರಿಂದ 12ನೇ ವಾರ್ಡ್‌ನ ಜನತೆಗೂ ಕಾವೇರಿ ನೀರು ಪೂರೈಸಬೇಕು ಎಂದು ಅವರು ಆಗ್ರಹಿಸಿದರು.

15 ದಿನ ಗಡುವು: ನಗರದ ಜನತೆಯ ನೀರಿನ ಬವಣೆ ನಿವಾರಿಸಲು ನಗರಸಭೆಗೆ 15 ದಿನಗಳ ಗಡುವು ನೀಡಲಾಗುವುದು. ಈ ಗಡುವಿನೊಳಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆ ನಿವಾರಿಸಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ಮಾಡುವ ಮೂಲಕ ಸದಸ್ಯರ ರಾಜೀನಾಮೆಗೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

ನಗರದ ಹೊರವಲಯದಲ್ಲಿ ಇರುವ ಅಚ್ಚಲು ಕಾರ್ಖಾನೆಗೆ ಸರಬರಾಜು ಮಾಡುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಿ, ಅದನ್ನು ನೀರಿನ ಬವಣೆ ಇರುವ ವಾರ್ಡ್‌ಗಳಿಗೆ ಸರಬರಾಜು ಮಾಡುವಂತೆ ಅವರು ಒತ್ತಾಯಿಸಿದರು.ನಗರಸಭೆಯ 21ನೇ ವಾರ್ಡ್‌ನ ಸದಸ್ಯ ಶಿವಕುಮಾರಸ್ವಾಮಿ ಮಾತನಾಡಿ, ನಗರದಲ್ಲಿ ಕುಡಿಯುವ ನೀರು ಹಾಗೂ ಯುಜಿಡಿ ಸಮಸ್ಯೆ ತೀವ್ರವಾಗಿದೆ. ಆದರೆ ಈ ಸಮಸ್ಯೆಗಳ ನಿವಾರಣೆಗೆ ನಗರಸಭೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆಯ ಸದಸ್ಯ ಬಿ.ನಾಗೇಶ್ ಮಾತನಾಡಿ, ನಗರಸಭೆಗೆ ಇತರ ಭಾಗಗಳಿಗಿಂತ ಹೆಚ್ಚಿನ ಕಂದಾಯ ಸಂಗ್ರಹವಾಗುವುದು 1ರಿಂದ 12ನೇ ವಾರ್ಡ್‌ನಿಂದ.ಆದರೆ ಈ ಭಾಗದ ಜನತೆಗೆ ಸಮರ್ಪಕ ನೀರು ಪೂರೈಸಲು ನಗರಸಭೆ ತಾತ್ಸಾರ ಮಾಡುತ್ತಿದೆ ಎಂದು ದೂರಿದರು.

ಘೋಷಣೆಗಳು: ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು, ಸ್ಥಾಯಿ ಸಮಿತಿ ಮುಖ್ಯಸ್ಥರು ಹಾಗೂ ಜಲಮಂಡಳಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಬಿಜೆಪಿ ಕಾರ್ಯಕರ್ತರು ಕೂಗಿದರು. ನಗರಸಭೆ ಸದಸ್ಯ ದೊಡ್ಡಿ ಸುರೇಶ್, ನಾಮನಿರ್ದೇಶಿತ ಸದಸ್ಯ ಸೋಮಶೇಖರ್ ಮಣಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.