ADVERTISEMENT

ಆನೇಕಲ್‌ನಲ್ಲಿ ಅಂಬಾರಿ ಮೇಲೆ ಜಂಬೂ ಸವಾರಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST
ಆನೇಕಲ್‌ನಲ್ಲಿ ಅಂಬಾರಿ ಮೇಲೆ ಜಂಬೂ ಸವಾರಿ
ಆನೇಕಲ್‌ನಲ್ಲಿ ಅಂಬಾರಿ ಮೇಲೆ ಜಂಬೂ ಸವಾರಿ   

ಆನೇಕಲ್: ಪಟ್ಟಣದ ಚೌಡೇಶ್ವರಿ ದೇವಿಯ ವಿಜಯದಶಮಿ ಉತ್ಸವ ಸಂಭ್ರಮ-ಸಡಗರಗಳಿಂದ ನೆರವೇರಿತು.
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಲಿಲ್ಲಿಯ ಮೇಲೆ ಅಂಬಾರಿಯಲ್ಲಿ ಚೌಡೇಶ್ವರಿ ದೇವಿ ಉತ್ಸವ ಮೂರ್ತಿಯನ್ನು ಕುಳ್ಳರಿಸಲಾಗಿತ್ತು. ವಿವಿಧ ಜಾನಪದ ತಂಡಗಳ ಪ್ರದರ್ಶನದ ಸಂಭ್ರಮದ ನಡುವೆ ಉತ್ಸವಕ್ಕೆ ತೊಗಟ ಪುಷ್ಪಾಂಜಲಿ ಮುನಿಗುರುಪೀಠದ ದಿವ್ಯಾನಂದ ಗಿರಿಸ್ವಾಮಿಗಳು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರು ಮಾತನಾಡಿ ಆನೇಕಲ್ ದಸರಾ ಮನೆಮನೆಯ ಉತ್ಸವವಾಗಬೇಕು. ಪಟ್ಟಣದ ಜನತೆ ಉತ್ಸವದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದರು. ದುಷ್ಟಶಕ್ತಿಗಳ ನಿವಾರಣೆಯ ಪ್ರತೀಕವಾದ ವಿಜಯದಶಮಿ ಉತ್ಸವವು ಮನುಷ್ಯನಲ್ಲಿನ ದುಷ್ಟಬುದ್ಧಿಗಳನ್ನು ನಾಶ ಮಾಡುವಂತಾಗಬೇಕು. ಸಮಾಜದಲ್ಲಿ ಮೌಲ್ಯಗಳು ನೆಲೆಯೂರುವಂತೆ ಈ ಧಾರ್ಮಿಕ ಕಾರ್ಯಕ್ರಮವು ಪ್ರೇರೇಪಿಸಲಿ ಎಂದು ನುಡಿದರು.

ಉತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಹೆಲಿಕಾಪ್ಟರ್ ಮುಖಾಂತರ ಅಂಬಾರಿಗೆ ಪುಷ್ಪವೃಷ್ಠಿ ಮಾಡಲಾಯಿತು. ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಠಿಯಾಗುತ್ತಿದ್ದಂತೆಯೇ ನೆರೆದಿದ್ದ ಸಹಸ್ರಾರು ಮಂದಿ ಜನಸಮೂಹ ಉತ್ಸಾಹದಿಂದ ಜಯಘೋಷ ಮಾಡಿದರು. ಅರ್ಚಕ ಶ್ರೀನಾಥಭಟ್ಟರ್ ದೇವಿಗೆ ಮಂಗಳಾರತಿ ಮಾಡಿದ ನಂತರ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಸಾಗಿತು.

ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಉತ್ಸವವನ್ನು ವೀಕ್ಷಿಸಿದರು. ಉತ್ಸವ ಮನೆಯ ಬಳಿ ಬರುತ್ತಿದ್ದಂತೆಯೇ ಮುಂಬಾಗಿಲಲ್ಲಿ ರಂಗೋಲಿ ಹಾಕಿ, ದೇವಿಗೆ ಪೂಜೆ ಸಲ್ಲಿಸಿದರು.

ಮನೆಗಳ ಮೇಲೆ ಸಹ ಜನರು ನಿಂತಿದ್ದುದು ಕಂಡುಬಂದಿತು.  ಶ್ರೀ ಭಮರಾಂಭ ಅಮೃತ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಬಳಿ ಇರುವ ಶಮಿವೃಕ್ಷ(ಬನ್ನಿಮರ)ಕ್ಕೆ ದೇವಾಲಯ ಸಮಿತಿಯ ಮುಖಂಡರು ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಅಂಬು ಎಸೆದರು (ಬಾಣಬಿಟ್ಟರು).

ರಾಜಾಪುರ ಸಂಸ್ಥಾನ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ, ಪುರಸಭಾ ಅಧ್ಯಕ್ಷೆ ಉಮಾಗೋಪಿ, ಉಪಾಧ್ಯಕ್ಷ ಶ್ರೀನಿವಾಸ್, ಕಿಯೋನಿಕ್ಸ್ ಅಧ್ಯಕ್ಷ ಎಂ.ಯಂಗಾರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಮಚಂದ್ರ, ಕೆಪಿಸಿಸಿ ಸದಸ್ಯ ಬಿ.ಶಿವಣ್ಣ, ಎನ್.ಆರ್. ವಿದ್ಯಾಸಂಸ್ಥೆಯ ನಂಜಾರೆಡ್ಡಿ, ಪುರಸಭಾ ಮಾಜಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ, ಸದಸ್ಯೆ ಅನುಸೂಯಾ ವೆಂಕಟರಾಜು, ಬಿಜೆಪಿ ಮುಖಂಡ ದಿನ್ನೂರು ರಾಜು, ದೇವಾಲಯ ಸಮಿತಿಯ ಅಧ್ಯಕ್ಷ ಎನ್.ಸಂಪಂಗಿರಾಮಯ್ಯ, ಯುವ ಕಾಂಗ್ರೆಸ್ ಮುಖಂಡ ಕೇಶವ, ತೊಗಟ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ವೆಂಕಟೇಶ್, ಆನೇಕಲ್ ನಾಗರಿಕ ವೇದಿಕೆಯ ಅಧ್ಯಕ್ಷ ಬಿ.ಶೈಲೇಂದ್ರಕುಮಾರ್ ಮತ್ತಿತರರು ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.