ADVERTISEMENT

ಉದ್ಯಾನ ನಿರ್ವಹಣೆಗೆ ಆಸಕ್ತಿಯ ಕೊರತೆ

ಪ್ರಾಧಿಕಾರ–ನಗರಸಭೆ ಸಂಘರ್ಷಕ್ಕೆ ಗಾಂಧಿ ಪಾರ್ಕ್‌ ಬಲಿ l ಉಳಿದ ಉದ್ಯಾನಗಳಲ್ಲೂ ನಿರ್ವಹಣೆಗೆ ಸಮಸ್ಯೆ

ಆರ್.ಜಿತೇಂದ್ರ
Published 8 ಜೂನ್ 2017, 11:53 IST
Last Updated 8 ಜೂನ್ 2017, 11:53 IST
ಅರ್ಕಾವತಿ ಬಡಾವಣೆಯ ಗ್ಯಾಸ್‌ ಗೋದಾಮು ಪಕ್ಕದ ಉದ್ಯಾನ
ಅರ್ಕಾವತಿ ಬಡಾವಣೆಯ ಗ್ಯಾಸ್‌ ಗೋದಾಮು ಪಕ್ಕದ ಉದ್ಯಾನ   

ರಾಮನಗರ: ಲಕ್ಷಕ್ಕೂ ಹೆಚ್ಚು ಜನರಿರುವ ನಗರದಲ್ಲಿ ಇರುವುದು ಮಾತ್ರ ಬರೀ ಎಂಟು ಉದ್ಯಾನ. ಅದರಲ್ಲೂ  ಒಂದೆರಡು ಮಾತ್ರ ಸುಸ್ಥಿತಿಯಲ್ಲಿದ್ದು, ಉಳಿದವು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.

ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ನಗರದ ಮಂದಿ ಹೆಚ್ಚಾಗಿ ವಾಯುವಿಹಾರಕ್ಕೆ ಉದ್ಯಾನಗಳನ್ನು ಆಶ್ರಯಿಸತೊಡಗಿದ್ದಾರೆ. ಮಕ್ಕಳೂ ಸಂಜೆ ಸಮಯದಲ್ಲಿ ಇಲ್ಲಿ ಆಡತೊಡಗುತ್ತಾರೆ, ಮನೆಯ ಮಹಿಳೆಯರೂ ಒಂದಿಷ್ಟು ಹೊತ್ತು ಇಲ್ಲಿ ಬಂದು ತಣ್ಣನೆಯ ಗಾಳಿ ಸೇವಿಸಿ ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ಜನರಿಗೆ ಅವಶ್ಯವಾದ ಮೂಲಕ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನಗರಸಭೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಸಂಘರ್ಷಕ್ಕೆ ಬಲಿ: ಕೋರ್ಟ್‌ ಆವರಣದ ಸಮೀಪ ಇರುವ ಮಹಾತ್ಮ ಗಾಂಧಿ ಉದ್ಯಾನವು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ನಡುವಿನ ಸಂಘರ್ಷದಿಂದಾಗಿ ಪಾಳು ಬೀಳತೊಡಗಿದೆ.

ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರವು ಬರೋಬ್ಬರಿ ₹30 ಲಕ್ಷ ವೆಚ್ಚದಲ್ಲಿ ಈ ಉದ್ಯಾನವನ್ನು ಈಚೆಗಷ್ಟೇ ಅಭಿವೃದ್ಧಿ ಪಡಿಸಿತ್ತು. ಪ್ರಾಧಿಕಾರದ ಹಿಂದಿನ ಅಧ್ಯಕ್ಷೆ ಶಾರದಾ ಗೌಡ ತಮ್ಮ ಆಡಳಿತಾವಧಿಯ ಕೊನೆಯ ದಿನದಂದು ಈ ನವೀಕೃತ ಉದ್ಯಾನವನ್ನು ಉದ್ಘಾಟಿಸಿ ಹೋಗಿದ್ದರು. ಆದರೆ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡಿದ ವ್ಯಯಿಸಿದ ಹಣ ವ್ಯರ್ಥವಾಗತೊಡಗಿದೆ.

‘ಈ ಉದ್ಯಾನದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದ ಪ್ರಾಧಿಕಾರವು ಮೊದಲ ವರ್ಷ ತಾನೇ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ನಂತರದಲ್ಲಿ ಇದನ್ನು ಹಸ್ತಾಂತರಿಸಿಕೊಳ್ಳುವಂತೆ ನಗರಸಭೆಗೆ ಮನವಿ ಮಾಡಿತು. ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಇಡಲಾಗಿದ್ದು, ಒಪ್ಪಿಗೆ ದೊರೆಯಲಿಲ್ಲ’ ಎನ್ನುತ್ತಾರೆ ನಗರಸಭೆ ಆಯುಕ್ತ ಕೆ. ಮಾಯಣ್ಣಗೌಡ.

ಇನ್ನಷ್ಟು ಬೇಕು: ನಗರಸಭೆ ಬಳಿಯೇ ಇರುವ ಬೃಹತ್‌ ಟ್ಯಾಂಕಿನ ಸುತ್ತಲಿನ ಜಾಗವನ್ನು ಉದ್ಯಾನಕ್ಕೆಂದು ಮೀಸಲಿಟ್ಟಿದ್ದರೂ ಅದು ಯಾವುದೇ ಅಭಿವೃದ್ಧಿ ಕಂಡಿಲ್ಲ. ನಗರದ ಹೃದಯ ಭಾಗದಲ್ಲಿಯೇ ಈ ಜಾಗವಿದ್ದರೂ ಇಲ್ಲೊಂದು ಸುಂದರ ಪಾರ್ಕ್‌ ನಿರ್ಮಾಣ ಮಾಡುವ ಯೋಚನೆ ನಗರಸಭೆ ಜನಪ್ರತಿನಿಧಿಗಳಿಗೆ ಇದ್ದಂತೆ ಇಲ್ಲ.
ಗೌಸಿಯಾ ನಗರದಲ್ಲಿ ಇರುವ ಸಿ.ಎ. ನಿವೇಶನದಲ್ಲಿ ₹18 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಗೆ ಯೋಜನೆ ಹಮ್ಮಿಕೊಂಡಿದ್ದು, ಅದು ಹಿಂದೆ ಬಿದ್ದಿದೆ. ಇನ್ನೂ ಹಲವು ಕಡೆ ಸರ್ಕಾರಿ ಜಾಗ, ಸಿ.ಎ. ನಿವೇಶನಗಳು ಲಭ್ಯವಿದ್ದರೂ ಅದರ ಅಭಿವೃದ್ಧಿ ಆಗಿಲ್ಲ.

ಪ್ರಾಧಿಕಾರದ ವತಿಯಿಂದ ರಚನೆ ಮಾಡಲಾಗಿರುವ ಹಲವು ಬಡಾವಣೆಗಳಲ್ಲಿ ಹೆಸರಿಗಷ್ಟೇ ಉದ್ಯಾನಕ್ಕೆ ಜಾಗ ಬಿಡಲಾಗಿದೆ. ಇಲ್ಲಿ ಕಾಂಪೌಂಡು ಬಿಟ್ಟರೆ ಹೆಚ್ಚಿನ ಕಾಮಗಾರಿ ನಡೆದಿಲ್ಲ.

‘ರೈಲು ನಿಲ್ದಾಣದ ಆಸುಪಾಸಿನ ಹಲವು ಬಡಾವಣೆಗಳಲ್ಲಿ ಹೆಸರಿಗೂ ಒಂದು ಪಾರ್ಕ್‌ ಇಲ್ಲ. ಕೆಲವು ಕಡೆ ಉಸಿರುಗಟ್ಟುವ ವಾತಾವರಣ ಇದೆ. ಅಂತಹ ಜಾಗಗಳಲ್ಲಿ ಜನರಿಗೆ ಅವಶ್ಯವಾದ ಉದ್ಯಾನ ನಿರ್ಮಾಣದ ಅಗತ್ಯ ಇದೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದು ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎನ್ನುತ್ತಾರೆ ಸ್ಥಳೀಯರಾದ ಪರಮೇಶ್‌.

**

ಉತ್ತಮ ಉದ್ಯಾನಗಳಿವು

ಅರ್ಕಾವತಿ ಬಡಾವಣೆಯ ಗ್ಯಾಸ್‌ ಗೋದಾಮು ಪಕ್ಕ, ಐಜೂರು ವಾಟರ್‌ಟ್ಯಾಂಕ್‌ ಹಾಗೂ ನೇತಾಜಿ ಪಾಪ್ಯುಲರ್‌ ಶಾಲೆ ಬಳಿಯ ಉದ್ಯಾನಗಳು ತಕ್ಕ ಮಟ್ಟಿಗೆ ಸುಸ್ಥಿತಿಯಲ್ಲಿ ಇವೆ.

ಐಜೂರು ಪಾರ್ಕಿನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಹೆಚ್ಚು ಮಂದಿ ವಾಯುವಿಹಾರ ಮಾಡುತ್ತಾರೆ. ಹಿರಿಯರು ವಿಶ್ರಮಿಸಲು ನೆರಳಿನ ವ್ಯವಸ್ಥೆಯೂ ಇದೆ. ಪಾದಚಾರಿ ಮಾರ್ಗವೂ ಉತ್ತಮವಾಗಿದ್ದು, ದೀಪಗಳ ವ್ಯವಸ್ಥೆ ಇದೆ. ಅರ್ಕಾವತಿ ಬಡಾವಣೆಯ ಉದ್ಯಾನವನ್ನು ತಕ್ಕಮಟ್ಟಿಗೆ ನಿರ್ವಹಣೆ ಮಾಡಲಾಗಿದ್ದು, ಹೆಚ್ಚು ಗಿಡಗಳನ್ನು ನೆಡಲಾಗಿದೆ. ಮಕ್ಕಳ ಮನರಂಜನೆಗೆಂದು ಆಟಿಕೆಗಳ ವ್ಯವಸ್ಥೆಯೂ ಇದೆ. ಮುಂಜಾನೆ ಹಾಗೂ ಸಂಜೆ ವೇಳೆ ಪಾದಚಾರಿಗಳ ಅನುಕೂಲಕ್ಕಾಗಿ ದೀಪಗಳನ್ನು ಹಾಕಲಾಗಿದೆ. ವಿರಮಿಸಲು ಕಲ್ಲುಬೆಂಚಿನ ವ್ಯವಸ್ಥೆಯೂ ಇದೆ. ನೇತಾಜಿ ಪಾಪ್ಯುಲರ್‌ ಶಾಲೆಯ ಬಳಿಯ ಉದ್ಯಾನವು ಅಭಿವೃದ್ಧಿ ಕಾಣುತ್ತಿದೆ. ಇಲ್ಲಿನ ಕೆಲವು ಸ್ಥಳೀಯರು, ನಿವೃತ್ತ ಅಧಿಕಾರಿಗಳು ಗಿಡ ನೆಟ್ಟು ಬೆಳೆಸತೊಡಗಿದ್ದಾರೆ. ಅಲ್ಲಲ್ಲಿ ಹಸಿರು ನಳನಳಿಸತೊಡಗಿದೆ. ನಗರಸಭೆ ವತಿಯಿಂದ ಇಲ್ಲಿ ಇನ್ನಷ್ಟು ಅವಶ್ಯವಾದ ಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುತ್ತಾರೆ ಸ್ಥಳೀಯರು.

**

ನಗರಸಭೆ ವ್ಯಾಪ್ತಿಯಲ್ಲಿ ಎಂಟು ಉದ್ಯಾನಗಳು ಇದ್ದು, ಕೆಲವನ್ನು ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ. ಉಳಿದವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು
-ಕೆ. ಮಾಯಣ್ಣಗೌಡ, ಆಯುಕ್ತರು ನರಗಸಭೆ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.