ADVERTISEMENT

ಕಾನೂನಿನ ಮಹತ್ವ ಅರಿಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮೇ 2015, 11:01 IST
Last Updated 9 ಮೇ 2015, 11:01 IST

ಮಾಗಡಿ: ರಾಷ್ಟ್ರದ ಅಭಿವೃದ್ಧಿಯಲ್ಲಿ   ಸಂವಿಧಾನದ ಆಶಯಗಳು ಜಾರಿಯಾಗ ಬೇಕಾದರೆ ಪ್ರಜೆಗಳು ಸರಳ ಕಾನೂನುಗಳನ್ನು ಬಲ್ಲವರಾಗಿಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕೆ.ಮಹದೇವ್‌  ಅಭಿಪ್ರಾಯ ಪಟ್ಟರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಆರಂಭವಾದ ಸಂಚಾರಿ ಲೋಕ ಅದಾಲತ್‌ ಮತ್ತು ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು  ಹೊಂದಿರುವ ನಮ್ಮ ದೇಶದ ಸಂವಿಧಾನವು ಪ್ರತಿ ಪ್ರಜೆಯೂ ಅನ್ಯಾಯಕ್ಕೆ ಒಳಗಾದಾಗ ಯಾವುದೇ ತಾರತಮ್ಯಕ್ಕೆ ಒಳಗಾಗದೆ ನ್ಯಾಯ ದೊರಕಿಸಿಕೊಳ್ಳುವ ಸಮಾನ ಅವಕಾಶದ ಭರವಸೆಯನ್ನು ಕೊಡಮಾಡಿದೆ ಎಂದರು.
ಆದರೆ ಕಾನೂನು ಸಾಕ್ಷರತೆ ತುಂಬಾ ಕಡಿಮೆ ಇರುವ ನಮ್ಮ ದೇಶದಲ್ಲಿ ಹಕ್ಕುಗಳ ಬಗೆಗಿನ ಸರಿಯಾದ ತಿಳುವಳಿಕೆಯ ಕೊರತೆ ಮತ್ತು ಹಣಕಾಸಿನ ಕೊರತೆಯಿಂದಾಗಿ ಸಮಾಜದ ಮಧ್ಯಮ, ದುರ್ಬಲ ವರ್ಗದವರು, ಶೋಷಿತರು ಹಾಗೂ ನಿರ್ಗತಿಕರು ಅನ್ಯಾಯಕ್ಕೊಳಗಾದಾಗ ನ್ಯಾಯ ದೊರಕಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

ಇಂದಿನಿಂದ ಮೂರು ದಿನಗಳ ಕಾಲ ಸೋಲೂರು ಮತ್ತು ತಿಪ್ಪಸಂದ್ರ ಹೋಬಳಿಗಳಲ್ಲಿ ಕಾನೂನು ಸಾಕ್ಷರಥ ಸಂಚರಿಸಲಿದೆ. ಜೊತೆಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಜನತೆ ಕಾನೂನು ಅರಿವು ನೆರವು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್‌ ನ್ಯಾಯಾಧೀಶ ಕೆ.ಮಹದೇವ್‌ ಜನತೆಗೆ ಕರೆ ನೀಡಿದರು.
ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಕೆ.ಎಂ. ಆನಂದ್‌,  ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ.ಎಸ್‌.ಲತಾ, ಜಿ. ವೆಂಕಟಲಕ್ಷ್ಮಮ್ಮ, ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಚ್‌. ಮಲ್ಲಿಕಾರ್ಜುನಯ್ಯ, ವಕೀಲರಾದ ಕೆ.ಎಸ್‌. ಪ್ರಕಾಶ್‌, ಸಿದ್ದರಾಜು  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.