ADVERTISEMENT

‘ಕಾನೂನು ತಿಳಿವಳಿಕೆ ಎಲ್ಲರಿಗೂ ಮುಖ್ಯ’

ರಾಮನಗರದಲ್ಲಿ ಕಾನೂನು ಅರಿವು – ನೆರವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 9:52 IST
Last Updated 25 ಜುಲೈ 2017, 9:52 IST
ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರಕಾಶ್ ಎಲ್‌ ನಾಡಿಗೇರ್‌ ಉದ್ಘಾಟಿಸಿದರು
ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರಕಾಶ್ ಎಲ್‌ ನಾಡಿಗೇರ್‌ ಉದ್ಘಾಟಿಸಿದರು   

ರಾಮನಗರ: ‘ಜನಸಾಮಾನ್ಯರಿಗೆ ಸ್ವಾವಲಂಬಿ ಬದುಕಿಗಾಗಿ ಸಾಮಾನ್ಯ ಜ್ಞಾನದ ಕಾನೂನು ತಿಳಿವಳಿಕೆ ಬಹಳ ಮುಖ್ಯ, ನಮ್ಮ ಹಕ್ಕು ಬಾಧ್ಯತೆಗಳ ರಕ್ಷಣೆಗೆ ಕಾನೂನು ದಂಡ ಸಂಹಿತೆಗಳು ರಕ್ಷಣೆ ನೀಡುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರಕಾಶ್‌ ಎಲ್‌ ನಾಡಿಗೇರ್‌ ಹೇಳಿದರು. ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ನಡೆದ ಉದ್ಘಾಟಿಸಿ ಮಾತನಾಡಿದರು.

‘ವಿಶ್ವದಲ್ಲಿ ಅತಿ ಉತ್ತಮ ಸಂವಿಧಾನ ಹಾಗೂ ಕಾನೂನು ಹಕ್ಕು ಭಾರತದ ನಾಗರಿಕರಿಗೆ ಲಭ್ಯವಾಗಿದೆ. ವ್ಯಕ್ತಿಯ ಹುಟ್ಟಿನ ಮೊದಲು ಹಾಗೂ ಮರಣದ ನಂತರವೂ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿರುತ್ತದೆ’ ಎಂದು ತಿಳಿಸಿದರು.

‘ಸಮಾಜದಲ್ಲಿ ಕೆಲವೊಂದು ಮೌಢ್ಯಗಳು ಮನೆ ಮಾಡಿದ್ದು, ಕಾನೂನಿನ ಹಲವು ಅಂಶಗಳು ಪುಸ್ತಕಕ್ಕೆ ಮಾತ್ರ ಸೀಮಿತಗೊಂಡಿದೆ. ಇಂದಿನ ಯುವಸಮುದಾಯಕ್ಕೆ ಕಾನೂನಿನ ಬಗ್ಗೆ ಸಮರ್ಪಕವಾದ ಮಾಹಿತಿ ಇಲ್ಲ. ಕೆಲವೊಂದು ಕಾಯ್ದೆಗಳು ವಕೀಲರಿಗೂ ತಿಳಿದಿಲ್ಲ’ ಎಂದು ತಿಳಿಸಿದರು.

ADVERTISEMENT

ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ಆಚಾರ್ಯ ಮಾತನಾಡಿ ‘ಕಾನೂನು ನಿಯಮಗಳನ್ನು ಪಾಲಿಸ ಬೇಕಾದ ಜನರೆ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದಾರೆ. ವಾಹನ ಚಾಲನ ಪರವಾನಿಗೆ, ವಿಮೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣ ಪತ್ರಗಳಿಲ್ಲದೆ ಅನೇಕ ವಾಹನಗಳು ನಗರ ದಲ್ಲಿ ಸಂಚರಿಸುತ್ತಿವೆ’ಎಂದು ತಿಳಿಸಿದರು.

‘ಸಂಚಾರ ನಿಮಯ ಪಾಲಿಸದೆ ಇರುವುದರಿಂದ ಅಪಘಾತ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. 18 ವರ್ಷ ತುಂಬದ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಮೊದಲು ದಂಡ ಹಾಕಬೇಕಾಗಿದೆ’ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ವಿವಿಧೆಡೆ ಸಂಚರಿಸಿ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಲಾ ಯಿತು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಉಮೇಶ್ ಮೂಲಿಮನಿ, ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಕೃಷ್ಣ ರೈ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್.ಹೊನ್ನಸ್ವಾಮಿ, ಶಾಂತಿನಿಕೇತನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್. ಕುಮಾರಸ್ವಾಮಿ, ಮಕ್ಕಳ ರಕ್ಷಣಾ ಧಿಕಾರಿ ತಾಜುದ್ದೀನ್‌ ಖಾನ್‌ ಇದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.