ADVERTISEMENT

‘ಕಾವ್ಯ ಸಾಹಿತ್ಯ ಸಂವೇದನೆ ವಿಸ್ತರಿಸಲಿ’

ಚಕೋರ ಕವಿ ಕಾವ್ಯ ವಿಚಾರ ವೇದಿಕೆ ಉದ್ಘಾಟಿಸಿ ವಾಸುದೇವ ನಾಡಿಗ್‌ ಆಶಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 6:53 IST
Last Updated 11 ಜೂನ್ 2018, 6:53 IST

ರಾಮನಗರ: ಕಾವ್ಯ ಪ್ರಜ್ಞೆಯು ಸಾಹಿತ್ಯ ಸಂವೇದನೆಯನ್ನು ವಿಸ್ತರಿಸಲು ಸಹಕಾರಿಯಾಗಬೇಕು ಎಂದು ಸಾಹಿತಿ ವಾಸುದೇವ ನಾಡಿಗ್‌ ಹೇಳಿದರು. ಇಲ್ಲಿನ ಸ್ಫೂರ್ತಿ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಭಾನುವಾರ ಏರ್ಪಡಿಸಿದ್ದ ‘ಚಕೋರ ಕವಿ ಕಾವ್ಯ ವಿಚಾರ ವೇದಿಕೆ–61 ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾವ್ಯ ಅಶಾಸ್ತ್ರೀಯವಾದರೂ ಲೋಕೋತ್ತರವಾದದು. ಕವಿ ಬೆಳದಿಂಗಳನ್ನು ಆಸ್ವಾದಿಸಿ ಬಿಸಿಲನ್ನೂ ಹಿಡಿದಿಡಬೇಕು. ಪರಂಪರೆಯ ಪ್ರಜ್ಞೆ ಹೊಂದಿರಬೇಕು. ಧರ್ಮ ಹಾಗೂ ಸ್ವಧರ್ಮವನ್ನು ಪರೀಕ್ಷಿಸಬೇಕು ಎಂದರು.

ವಿಮರ್ಶೆ, ಸಂಶೋಧನೆ ಸೇರಿ ಎಲ್ಲ ರೀತಿಯ ಬರವಣಿಗೆಯೂ ಸೃಜನಶೀಲ ಸಾಹಿತ್ಯ. ಇತ್ತೀಚೆಗೆ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ವಿಮರ್ಶೆಯನ್ನು ಬರೆಯುವ ಹಾಗೂ ಓದುವವರು ಇನ್ನೂ ವಿರಳ. ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ವೇದಿಕೆಗಳ ಅಗತ್ಯವಿದೆ ಎಂದು ತಿಳಿಸಿದರು.

ADVERTISEMENT

ಬರೆದ ಪದವನ್ನು ಅಳಿಸಲಾರದೆ, ತಿದ್ದುಪಡಿ ಮಾಡದೆ ಕಾವ್ಯ ರಚಿಸುವ ಪ್ರವೃತ್ತಿ ಇಂದು ಕಡಿಮೆಯಾಗುತ್ತಿದೆ. ಆದರೆ ಹಿಂದಿನ ಕಾಲಘಟ್ಟದಲ್ಲಿ ಅಲ್ಲಮ ಪ್ರಭು, ದಾಸಿಮಯ್ಯ ಮತ್ತು ಕುಮಾರವ್ಯಾಸರಂತಹ ಅನೇಕರು ತಾವು ಬರೆದುದನ್ನು ಮತ್ತೊಮ್ಮೆ ತಿದ್ದುಪಡಿ ಮಾಡಲು ಮುಂದಾಗದೆ ಸೃಜನಶೀಲತೆ ಕಾಪಾಡಿಕೊಂಡಿದ್ದರು ಎಂದು ತಿಳಿಸಿದರು.

ಕವಿ ಪ್ರೊ. ಎಂ. ಶಿವನಂಜಯ್ಯ ಮಾತನಾಡಿ ಕವಿತೆ ಬರೆಯುವುದು ಒಂದು ಹಂತ, ಅದನ್ನು ವಾಚನ ಮಾಡುವುದು ಇನ್ನೊಂದು ಹಂತ. ನಾನಾ ರೀತಿಯ ಭಾವನೆ, ಅರಿವು ಮತ್ತು ಜ್ಞಾನ ಸೇರಿ ಕಾವ್ಯದ ಸೃಷ್ಟಿಗೆ ಕಾರಣವಾಗುತ್ತದೆ. ಇದಕ್ಕೆ ನಿರಂತರ ಓದಿನ ಅಗತ್ಯ ಇದೆ. ಕವನ ವಾಚನ ಮಾಡುವುದನ್ನು ಅಭ್ಯಾಸ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತಿನಿಧಿ ವತ್ಸಲಾ ಸುರೇಶ್ ಮಾತನಾಡಿ ಸಾಹಿತ್ಯವನ್ನು ಪುಸ್ತಕದಲ್ಲೇ ಓದಬೇಕಿದ್ದು, ಇದರಿಂದ ಮಾತ್ರ ಅನುಭವದೊಂದಿಗೆ ಸಾಹಿತ್ಯ ಚೆನ್ನಾಗಿ ಅರ್ಥವಾಗುತ್ತದೆ. ಇತ್ತೀಚೆಗೆ ಸಾಹಿತ್ಯದ ಮಜಲು ವಿಸ್ತಾರಗೊಂಡಿರುವುದರಿಂದ ಇಂಟರ್‌ನೆಟ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಓದುತ್ತಿದ್ದಾರೆ ಎಂದರು.

ಇದು ಒಳ್ಳೆಯದಾಗಿದ್ದು, ಕನ್ನಡ ಸಾಹಿತ್ಯ ಉಳಿವಿಗೆ ಉತ್ತಮ ಮಾರ್ಗವಾಗಿದೆ. ಆದರೆ ಸಾಹಿತ್ಯಗಳನ್ನು ಪುಸ್ತಕದಲ್ಲಿ ಓದುವ ಸಾಹಿತ್ಯದ ರುಚಿಯೇ ಬೇರೆಯಾಗಿರುವುದರಿಂದ ಪುಸ್ತಕದಲ್ಲಿ ಸಾಹಿತ್ಯ ಓದುವ ಸಂಸ್ಕೃತಿ ಉಳಿಸಬೇಕಿದೆ ಎಂದು ತಿಳಿಸಿದರು.

ಕವಿಗಳಾದ ಮಹದೇವಗಟ್ಟಿಗುಂದ, ಎಸ್. ಸುಮಂಗಳ ಹಾರೊಕೊಪ್ಪ, ಎಸ್. ರುದ್ರೇಶ್ವರ, ಮತ್ತಿಕೆರೆ ಬಿ. ಚಲುವರಾಜು, ಬೊಮ್ಮನಾಯಕನ ಹಳ್ಳಿ ಕೃಷ್ಣಪ್ಪ, ಡಿ.ಆರ್. ಚಂದ್ರ ಮಾಗಡಿ, ವಸಂತ ಸುರೇಂದ್ರನಾಥ್, ಹನುಮಂತು ಕವಿತೆಗಳನ್ನು ವಾಚಿಸಿದರು.

ಜಿಲ್ಲಾ ರಂಗಭೂಮಿ ಕಾರ್ಯಾಧ್ಯಕ್ಷ ಶಿವಕುಮಾರ್, ಕನ್ನಡ ಸಾಹಿತ್ಯ ಪರಿತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಗಾಯಕ ಬಿ. ವಿನಯ್‌ಕುಮಾರ್, ಚೌ.ಪು. ಸ್ವಾಮಿ, ವಿಜಯ್‌ ರಾಂಪುರ, ಬಾಗೂರು ಪುಟ್ಟರಾಜು, ನಮನ ಎಂ. ಚಂದ್ರು, ಕೆ.ಎಸ್. ಭಾಸ್ಕರ್ ಇದ್ದರು.

ಶಿಕ್ಷಕರಾದ ಕೆ.ಶಿವಹೊಂಬಯ್ಯ, ಭಾರತಿ ಪ್ರಾರ್ಥಿಸಿದರು. ಕೂ.ಗಿ. ಗಿರಿಯಪ್ಪ ಸ್ವಾಗತಿಸಿದರು. ಎಚ್‌.ಕೆ. ಶೈಲಾ ಶ್ರೀನಿವಾಸ್ ನಿರೂಪಿಸಿದರು. ಸಿ. ರಮೇಶ್ ಹೊಸದೊಡ್ಡಿ ವಂದಿಸಿದರು.

ಕೃತಿ ಚೌರ್ಯ ಹೆಚ್ಚಳ

ಜನಪದ ವಿದ್ವಾಂಸ ಎಂ. ಬೈರೇಗೌಡ ಮಾತನಾಡಿ, ಇಂದು ಕೃತಿ ಚೌರ್ಯ ಸಂಸ್ಕೃತಿ ಹೆಚ್ಚಾಗುತ್ತಿದೆ. ನಿರಂತರ ಅಧ್ಯಯನ ಮಾಡುವವರು ಮಾತ್ರ ಗಟ್ಟಿ ಸಾಹಿತ್ಯವನ್ನು ರಚಿಸಬಹುದು ಎಂದರು. ಇಂದು ಹಲವು ಕನ್ನಡ ಭಾಷೆಯ ಶಿಕ್ಷಕರಿಗೆ, ಅಧ್ಯಾಪಕರಿಗೆ ಸಾಹಿತ್ಯ, ಸಂಸ್ಕೃತಿ ವಿಷಯಗಳ ಬಗ್ಗೆ ಅರಿವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾವ್ಯದೊಂದಿಗೆ ಮಾತ್ರ ಭಾವಸಂವಾದ ನಡೆದರೆ ಸಾಲದು. ಬೌದ್ಧಿಕ ಹಾಗೂ ತಾತ್ವಿಕ ಸಂಘರ್ಷವೂ ನಡೆಯಬೇಕು.
- ವಾಸುದೇವ ನಾಡಿಗ್‌, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.