ADVERTISEMENT

ಕೂಲಿ ಕೆಲಸ ಕೈಬಿಡದ ಶತಾಯುಷಿ

ಇವರ ಮನೆಯತ್ತ ಸುಳಿಯದ ಸರ್ಕಾರಿ ಸವಲತ್ತು

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 9:23 IST
Last Updated 3 ಜೂನ್ 2017, 9:23 IST
ಕೂಲಿ ಕೆಲಸ ಕೈಬಿಡದ ಶತಾಯುಷಿ
ಕೂಲಿ ಕೆಲಸ ಕೈಬಿಡದ ಶತಾಯುಷಿ   

ಮಾಡಬಾಳ್‌(ಮಾಗಡಿ): ಹೋಬಳಿಯ ಪರಂಗಿ ಚಿಕ್ಕನಪಾಳ್ಯದ ಶತಾಯುಷಿ ಬಚ್ಚಮ್ಮಜ್ಜಿ ಕಾಯಕದಲ್ಲಿ ನಿರತಾಗಿದ್ದಾರೆ. ಕಡುಬಡತನದಲ್ಲಿ ಮಗಳು ಮತ್ತು ಮೊಮ್ಮಕ್ಕಳನ್ನು ಸಾಕುವ ಹೊಣೆ ಬಚ್ಚಮ್ಮಜ್ಜಿಯ ಹೆಗಲ ಮೇಲಿದೆ.

ಸರ್ಕಾರಿ ಸವಲತ್ತುಗಳು ಇವರ ಮನೆಯತ್ತ ಸುಳಿದಿಲ್ಲ. ಸವಲತ್ತಿನ ಮಾಹಿತಿಯೂ ಗೊತ್ತಿಲ್ಲದ ಇವರು ತಾನಾಯಿತು, ತನ್ನ ಕೂಲಿಯ ಕೆಲಸವಾಯಿತು ಎಂಬಂತೆ ಜಗತ್ತಿನ ಜಂಜಡದ ಅರಿವಿಲ್ಲದೆ ನಂಬಿ ಬಂದ ಕೂಲಿ ಕೆಲಸ ಮಾಡುತ್ತಾ ಕೊಟ್ಟಷ್ಟು ಕೂಲಿಯ ಹಣದಲ್ಲೇ ಪ್ರಾಮಾಣಿಕತೆಯಿಂದ ಬದುಕು ಸಾಗಿಸುತ್ತಿದ್ದಾರೆ.

ಸರ್ಕಾರ ಹಿರಿಯ ನಾಗರಿಕರಿಗೆ ಕೊಡುವ ಮಾಸಾಶನ ಪಡೆದಿಲ್ಲವೇಕೆ? ಎಂದರೆ ‘ನಮ್ಮಂತಹ ಬಡವರಿಗೆ ಕೂಲಿ ಕೆಲಸ ಬಿಟ್ಟರೆ ದೇವರೇ ಗತಿ ಸ್ವಾಮಿ , ಮಾಸಾಶನ ಅಂದರೆ ಏನು ಸ್ವಾಮಿ ನಮಗ್ಯಾಕೆ ಬೇರೆಯವರ ಋಣದ ಹಂಗು’ ಎನ್ನುತ್ತಾರೆ. ನೂರು ವರ್ಷ ಕಳೆದಿದ್ದರೂ ಕಣ್ಣು, ಕಿವಿ ಚೆನ್ನಾಗಿ ಕೆಲಸ ಮಾಡುತ್ತಿವೆ. ಪರಂಗಿ ಚಿಕ್ಕನಪಾಳ್ಯದಲ್ಲಿ ಕಡು ಬಡವರಾದ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ, ಶುದ್ಧ ಕುಡಿಯುವ ನೀರು, ಸ್ವಚ್ಛತೆ ಇಲ್ಲಿ ಮರೀಚಿಕೆಯಾಗಿದೆ.
ಹರಕಲು ಮುರುಕಲು ಮಂಗಳೂರು ಹೆಂಚಿನ ಮನೆಯಲ್ಲಿ ನೂರಾರು ಕಡುಬಡವರ ಕುಟುಂಬಗಳು ಜೀವಿಸುತ್ತಿವೆ.

ADVERTISEMENT

ಬಚ್ಚಮ್ಮಜ್ಜಿ ರೋಗರಹಿತರಾಗಿದ್ದರೂ ಅಂದಂದಿನ ಗಂಜಿಗೆ ಕೂಲಿನಾಲಿ ಮಾಡಿ ಪರದಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತರು  ಇಳಿವಯಸ್ಸಿನಲ್ಲೂ ಕಡುಬಡತನದಲ್ಲಿ ಬದುಕಿನ ಬಂಡಿ ಎಳೆಯುತ್ತಿರುವ ಬಚ್ಚಮ್ಮಜ್ಜಿಯ ನೆರವಿಗೆ ಮುಂದಾಗ ಬೇಕೆಂದು ಜನಪದ ಕಲಾವಿದ ಶಿವಕುಮಾರ್‌ ಅಭಿಪ್ರಾಯವಾಗಿದೆ.
-ದೊಡ್ಡಬಾಣಗೆರೆ ಮಾರಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.