ADVERTISEMENT

ಜಾನಪದ: ಎಚ್‌ಎಲ್‌ಎನ್ ಶ್ರಮ ಅಪಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ರಾಮನಗರ: ಕನ್ನಡ ನಾಡಿನ ಜಾನಪದ ಕ್ಷೇತ್ರದ ಉಳಿವಿಗೆ ಎಚ್.ಎಲ್.ನಾಗೇಗೌಡರ ಪರಿಶ್ರಮ ಅಪಾರವಾದುದು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಶ್ಲಾಘಿಸಿದರು.

ಜಾನಪದ ಲೋಕದಲ್ಲಿ ಎಚ್.ಎನ್.ನಂಜರಾಜ್ ಸ್ಮರಾಣಾರ್ಥ ನಡೆದ ರಾಜ್ಯ ಮಟ್ಟದ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಜಾನಪದ ಕ್ಷೇತ್ರ ತನ್ನ ಅಸ್ತಿತ್ವ ಹೊಂದಲು ನಾಗೇಗೌಡರ ಕುಟುಂಬದ ಕೊಡುಗೆ ಮಹತ್ವದ್ದಾಗಿದೆ ಎಂದರು.

ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಪ್ರಮುಖವಾದುದು. ಅಂತೆಯೇ ಕಾಲೇಜು ವಿದ್ಯಾರ್ಥಿಗಳು ಇಂದು ಜಾನಪದ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ರಾಜ್ಯ ಮಟ್ಟದ ಜಾನಪದ ಕಲೆಗಳ ಸ್ಪರ್ಧೆಗಳನ್ನು ಏರ್ಪಡಿಸುವ ಪ್ರಯತ್ನ ಮಾಡಲಾಗುವುದು.

ಜಾನಪದ ಲೋಕವನ್ನು ದಕ್ಷಿಣ ಭಾರತದಲ್ಲೇ ಜನಪರ ಲೋಕವನ್ನಾಗಿ ಮಾಡಿ, ರಾಷ್ಟ್ರ ಮಟ್ಟದಲ್ಲಿ ಒಂದು ಅತ್ಯುತ್ತಮ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಲು ಮಹತ್ವಾಕಾಂಕ್ಷೆಯ ಯೋಜನೆ ರೂಪಿಸುತ್ತಿರುವುದಾಗಿ ಅವರು ತಿಳಿಸಿದರು.

ತೀರ್ಪುಗಾರರಾಗಿದ್ದ ವಾ.ನಂ.ಶಿವರಾಮ ಮಾತನಾಡಿ, ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರವೇ ನಡೆಸದೆ ರಾಜ್ಯದ ವಿವಿಧ ಭಾಗಗಳಲ್ಲೂ ಆಯೋಜಿಸಬೇಕು. ತನ್ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದರು.

ಪರಿಷತ್ತಿನ ಮ್ಯೋನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಎಚ್.ಆರ್. ರಾಜೇಗೌಡ, ಜಾನಪದ ವಿದ್ವಾಂಸ ಡಾ.ಕುರುವ ಬಸವರಾಜ್, ಗಾಯಕ ಮಲ್ಲಿಕಾರ್ಜುನ ನಾಗೇನಹಳ್ಳಿ, ರಂಗ ನಿರ್ದೇಶಕ ಬೈರ‌್ನಳ್ಳಿ ಶಿವರಾಮ ಮತ್ತಿತರರು ಭಾಗವಹಿಸಿದ್ದರು.

ಬಹುಮಾನ: ರಾಜ್ಯಮಟ್ಟದ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಂಡ್ಯ ಜಿಲ್ಲೆಯ ಕ್ಷೀರ ಸಾಗರಂ ಮಿತ್ರ ಮಂಡಳಿಯ ಮಂಜೇಶ್‌ಗೌಡ ಮತ್ತು ಸಂಗಡಿಗರು ಪಡೆದರು. ಲಗ್ಗೆರೆಯ ಮಾತೃಭೂಮಿ ಯುವಕ ಸಂಘದ ಭೀಮಪ್ಪ ಮತ್ತು ಸಂಗಡಿಗರು ದ್ವಿತೀಯ ಬಹುಮಾನ ಪಡೆದರೆ, ಚನ್ನಪಟ್ಟಣದ ಎಸ್.ಮುಕುಂದ ಮತ್ತು ಸಂಗಡಿಗರು ತೃತೀಯ ಬಹುಮಾನ ಗಳಿಸಿದರು. ತುಮಕೂರಿನ ಮೋಹನ್‌ಕುಮಾರ್ ಹಾಗೂ ಎಚ್.ಡಿ.ಕೋಟೆಯ ರಾಮಚಂದ್ರ ಸಮಾಧಾನಕರ ಬಹುಮಾನಗಳನ್ನು ಪಡೆದರು. ವಿಜೇತರಿಗೆ 12ರಂದು ನಡೆಯುವ ಜಾನಪದ ಲೋಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.