ADVERTISEMENT

ಜೆಡಿಎಸ್‌ಗೆ ಅಧ್ಯಕ್ಷ, ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:30 IST
Last Updated 17 ಫೆಬ್ರುವರಿ 2011, 18:30 IST

ರಾಮನಗರ:  ಸಾಕಷ್ಟು ಕುತೂಹಲ ಮೂಡಿಸಿದ್ದ ರಾಮನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಗುರುವಾರ ಒಲಿದಿದೆ.ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಜಿ.ಪಂ ಕ್ಷೇತ್ರದ ಜೆಡಿಎಸ್ ಸದಸ್ಯೆ ಕಲ್ಪನಾ ಮಲ್ಲಿಕಾರ್ಜುನೇಗೌಡ ಅವರು ಆಯ್ಕೆ ಆಗಿದ್ದಾರೆ.ಎಸ್.ಟಿ ಸಮುದಾಯದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನ ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಮಾದೇವಿ ಅವರಿಗೆ ದೊರೆತಿದೆ.

ಜಿಲ್ಲಾ ಪಂಚಾಯಿತಿಯ 22 ಸದಸ್ಯರ ಪೈಕಿ 12 ಜೆಡಿಎಸ್ ಹಾಗೂ 10 ಕಾಂಗ್ರೆಸ್ ಸದಸ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಎಸ್.ಟಿ ಸಮುದಾಯದ ಮಹಿಳಾ ಸದಸ್ಯರು ಇರಲಿಲ್ಲ.ಹಾಗಾಗಿ ಅದು ನಿರಾಯಾಸವಾಗಿ ಕಾಂಗ್ರೆಸ್‌ಗೆ ಒಲಿದಿದೆ.ಉಪಾಧ್ಯಕ್ಷ ಹುದ್ದೆಯ ಜತೆಗೆ ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾಂಗ್ರೆಸ್ ಪಕ್ಷದ ಮುಖಂಡರು ತೆರೆಯ ಮರೆಯಲ್ಲಿ ಮಾಡಿದ ಪ್ರಯತ್ನಗಳು ವಿಫಲವಾಗಿವೆ.

ಫಲಿಸದ ಕಾಂಗ್ರೆಸ್ ತಂತ್ರ: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಕೂಡ ಸ್ಪರ್ಧೆ ನಡೆಸಿತ್ತು. ರಾಮನಗರ ತಾಲ್ಲೂಕಿನ ಕೂಟಗಲ್ ಜಿ.ಪಂ ಕ್ಷೇತ್ರದ ಸದಸ್ಯೆ ಮಂಜುಳಾ ಮರಿದೇವರು ಅವರು ಉಮೇದುವಾರಿಕೆ ಸಲ್ಲಿಸಿ ಅಖಾಡ ಪ್ರವೇಶಿಸಿದ್ದರು.10 ಸದಸ್ಯರ ಬೆಂಬಲ ಹೊಂದಿದ್ದ ಕಾಂಗ್ರೆಸ್‌ಗೆ ಗೆಲುವು ಸಾಧಿಸಲು ಇಬ್ಬರಿಂದ ಮೂವರು ಸದಸ್ಯರ ಬೆಂಬಲ ಬೇಕಿತ್ತು.

ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಪೋಟಿಯಿಂದ ಜೆಡಿಎಸ್ ಪಕ್ಷದಲ್ಲಿ ಏನಾದರೂ ಬಿರುಕು ಸೃಷ್ಟಿಯಾದರೆ ಅದರ ಸಂಪೂರ್ಣ ಲಾಭ ಪಡೆಯುವುದು ಕಾಂಗ್ರೆಸ್‌ನ ಉದ್ದೇಶವಾಗಿತ್ತು.ಆದರೆ ಅದಕ್ಕೆ ಅವಕಾಶ ನೀಡದಂತೆ ಪ್ರತಿ ತಂತ್ರವನ್ನು ಜೆಡಿಎಸ್ ರೂಪಿಸಿತ್ತು.

ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದರು.ಅದರಲ್ಲಿ ಇಬ್ಬರು ಚನ್ನಪಟ್ಟಣ ಹಾಗೂ ಒಬ್ಬರು ಮಾಗಡಿಯವರಾಗಿದ್ದರು. ಚನ್ನಪಟ್ಟಣದ ಅಕ್ಕೂರಿನ ಸದಸ್ಯೆ ಕಲ್ಪನಾ ಮಲ್ಲಿಕಾರ್ಜುನೇಗೌಡ, ದೊಡ್ಡಮಳೂರಿನ ಸದಸ್ಯೆ ಯು.ಪಿ.ನಾಗೇಶ್ವರಿ ಹಾಗೂ ಮಾಗಡಿಯ ಕುದೂರಿನ ಎಚ್.ವಿ.ಹಂಸಕುಮಾರಿ ಪ್ರಬಲ ಪೈಪೋಟಿ ನೀಡಿದ್ದರು.ಜಿ.ಪಂ ಚುನಾವಣೆಯಲ್ಲಿ ಜೆಡಿಎಸ್‌ಗೆ ಪ್ರಚಂಡ ಗೆಲುವು ತಂದು ಕೊಟ್ಟ ಚನ್ನಪಟ್ಟಣದ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಒದಗಿಸಿಕೊಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿ, ಪ್ರಕಟಿಸಿದ್ದರು.

ಸ್ಪರ್ಧೆಯಿಂದ ಹಿಂದೆ ಸರಿದ ಹಂಸಕುಮಾರಿ: ಚನ್ನಪಟ್ಟಣದಲ್ಲಿ ಶಾಸಕರು ಇಲ್ಲದಿರುವುದರಿಂದ ಪಕ್ಷ ಸಂಘಟನೆಗೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಈ ಭಾಗದ ಜನತೆಯ ವಿಶ್ವಾಸವನ್ನು ಪಡೆಯಲು ಕುಮಾರಸ್ವಾಮಿ ಅವರು ಮನಸ್ಸು ಮಾಡಿದ್ದರು.ಹಾಗಾಗಿ ಸ್ಪರ್ಧೆಯಿಂದ ಕುದೂರಿನ ಹಂಸಕುಮಾರಿ ಅವರು ಹಿಂದೆ ಸರಿದಿದ್ದರು.ಆಗ ಚನ್ನಪಟ್ಟಣದ ಇಬ್ಬರು ಸದಸ್ಯೆಯರ ನಡುವೆ ತೀವ್ರ ಪೈಪೋಟಿ ಸೃಷ್ಟಿಯಾಗಿತ್ತು.

ಇಬ್ಬರಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ದೊರೆತರೂ ಮತ್ತೊಬ್ಬರು ಬಂಡಾಯ ಏಳಬಹುದು ಎಂಬ ಆತಂಕ ಪಕ್ಷದ ವರಿಷ್ಠರಲ್ಲಿ ಮನೆ ಮಾಡಿತ್ತು. ಇದು ಸಾಧ್ಯವಾದರೆ ಕಾಂಗ್ರೆಸ್ ಅಧಿಕಾರ ರಚಿಸಲು ಮುಂದಾಗಬಹುದು ಎಂಬ ಆತಂಕವೂ ಜೆಡಿಎಸ್‌ನಲ್ಲಿ ಆವರಿಸಿತ್ತು.

ಹಾಗಾಗಿ ಅಂತಿಮ ಹಂತದವರೆಗೂ ಇಬ್ಬರಲ್ಲಿ ಯಾರು ನಾಮಪತ್ರ ಸಲ್ಲಿಸಬೇಕು ಎಂಬುದನ್ನು ಜೆಡಿಎಸ್ ವರಿಷ್ಠರು ಅಂತಿಮಗೊಳಿಸಿರಲಿಲ್ಲ.ಈ ಗೊಂದಲಗಳ ನಡುವೆ ಗುರುವಾರ ಬೆಳಿಗ್ಗೆ 10.45 ಗಂಟೆಗೆ (ಕೊನೆಯ 15 ನಿಮಿಷ ಬಾಕಿ ಇರುವಾಗ) ಜೆಡಿಎಸ್‌ನ ಎಲ್ಲ ಸದಸ್ಯರೂ ಒಂದಾಗಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸಿದರು.ಪಕ್ಷದ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಅಕ್ಕೂರಿನ ಕಲ್ಪನಾ ಮಲ್ಲಿಕಾರ್ಜುನೇ ಗೌಡ ಅವರು ನಾಮಪತ್ರ ಸಲ್ಲಿಸುವಂತೆ ಸ್ಥಳೀಯ ಮುಖಂಡರು ತಿಳಿಸಿದರು. ಅದರಂತೆ ಅವರು ನಾಮಪತ್ರ ಸಲ್ಲಿಸಿದರು.

ಜೆಡಿಎಸ್‌ನಲ್ಲಿ ಮೂಡಿದ ಚಡಪಡಿಕೆ:  ಆ ಕೂಡಲೇ ಸಣ್ಣ ಪ್ರಮಾಣದಲ್ಲಿ ಬಂಡಾಯದ ಬಿಸಿಯನ್ನು ದೊಡ್ಡ ಮಳೂರಿನ ನಾಗೇಶ್ವರಿ ಅವರು ಜೆಡಿಎಸ್‌ಗೆ ನೀಡಿದರು.‘ಪಕ್ಷದ ಹಿರಿಯರು ಮೊದಲು ನನಗೆ ಅವಕಾಶ ಕೊಡಬಹುದಿತ್ತಲ್ಲ.ಹೀಗೇಕೆ ಮಾಡಿದರು. ನಾನು ಹೊರಗೆ ಹೋಗುತ್ತೇನೆ’ ಎಂದು ಹೊರಟು ಹೋದರು.ಇದರಿಂದ ಜೆಡಿಎಸ್‌ನಲ್ಲಿ ಆತಂಕ ಹಾಗೂ ಚಡಪಡಿಕೆ ಮೂಡಿತು.ಅಂತಿಮವಾಗಿ ನಾಗೇಶ್ವರಿ ಹಾಗೂ ಅವರ ಪತಿ ಬೋರ್‌ವೆಲ್ ರಾಮಚಂದ್ರ ಅವರನ್ನು ಸಮಾಧಾನ ಪಡಿಸಿದ ಶಾಸಕ ಕೆ.ರಾಜು ಅವರು ಇಬ್ಬರನ್ನು ವಾಹನದಲ್ಲಿ ಕರೆದುಕೊಂಡು ಹೋದರು.

ಆ ನಂತರ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಸಂಧಾನ ಸೂತ್ರವೊಂದನ್ನು ರಚಿಸಿ ಆಕಾಂಕ್ಷಿಗಳ ಮನವೊಲಿಸಲಾಯಿತು.20 ತಿಂಗಳ ಅವಧಿಯಲ್ಲಿ ಚನ್ನಪಟ್ಟಣದ ಇಬ್ಬರೂ ಮಹಿಳೆಯರಿಗೆ ಹಾಗೂ ಮಾಗಡಿಯ ಹಂಸಕುಮಾರಿ ಅವರಿಗೂ ಅವಕಾಶ ನೀಡಲು ತೀರ್ಮಾನಿಸಲಾಯಿತು.ಇದಕ್ಕೆ ಎಲ್ಲರೂ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.

ಕೈ ಎತ್ತುವ ಮೂಲಕ ಆಯ್ಕೆ: ಚುನಾವಣಾ ಕಣದಿಂದ ಹಿಂದೆ ಸರಿಯಲು ಕಾಂಗ್ರೆಸ್ ಒಪ್ಪದಿದ್ದಾಗ ಚುನಾವಣೆ ನಡೆಸಲಾಯಿತು.ಕೈ ಎತ್ತುವ ಮೂಲಕ ಜೆಡಿಎಸ್‌ನ 12 ಸದಸ್ಯರು ತಮ್ಮ ಮತವನ್ನು ಜೆಡಿಎಸ್‌ನ ಕಲ್ಪನಾ ಮಲ್ಲಿಕಾರ್ಜುನೇಗೌಡ ಅವರಿಗೆ ನೀಡಿದರು.ಕಾಂಗ್ರೆಸ್‌ನ 10 ಸದಸ್ಯರು ತಮ್ಮ ಮತವನ್ನು ಕಾಂಗ್ರೆಸ್‌ನ ಮಂಜುಳಾ ಮರಿದೇವರು ಅವರಿಗೆ ನೀಡಿದರು.ಎರಡು ಮತಗಳ ಅಂತರದಿಂದ ಕಲ್ಪನಾ ಮಲ್ಲಿಕಾರ್ಜುನೇಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ (ಪ್ರಭಾರಿ) ಪ್ರಭಾಕರ್ ಘೋಷಿಸಿದರು.ಪಕ್ಷದ ಕಾರ್ಯಕರ್ತರು ಪಠಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.