ADVERTISEMENT

ಟೀಕೆಗೆ ನಾವು ಸೊಪ್ಪು ಹಾಕುವುದಿಲ್ಲ

ಕೋಡಿಹಳ್ಳಿಯಲ್ಲಿ ಜನಸ್ಪಂದನ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಗುಡುಗು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 9:58 IST
Last Updated 5 ಫೆಬ್ರುವರಿ 2014, 9:58 IST
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಮಂಗಳವಾರ ನಡೆದ ಪಹಣಿ ತಿದ್ದುಪಡಿ ಆಂದೋಲನ ಕಾರ್ಯ ಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಎಸ್‌.ವಿಶ್ವನಾಥ್‌ ಉದ್ಘಾಟಿಸಿದರು. ಸಂಸದ ಡಿ.ಕೆ.ಸುರೇಶ್ ಇದ್ದರು
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಮಂಗಳವಾರ ನಡೆದ ಪಹಣಿ ತಿದ್ದುಪಡಿ ಆಂದೋಲನ ಕಾರ್ಯ ಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಎಸ್‌.ವಿಶ್ವನಾಥ್‌ ಉದ್ಘಾಟಿಸಿದರು. ಸಂಸದ ಡಿ.ಕೆ.ಸುರೇಶ್ ಇದ್ದರು   


ಕನಕಪುರ: ‘ನಮ್ಮ ಏಳಿಗೆಯನ್ನು ಸಹಿಸದ ವಿರೋಧಿಗಳು ನಮ್ಮ ಬಗ್ಗೆ ಟೀಕೆ, ಆರೋಪ­ಗಳನ್ನು ಮಾಡುತ್ತಾರೆ. ಅದಕ್ಕೆ ನಾವು ಕಿವಿಕೊಡು­ವುದಿಲ್ಲ ಹಾಗೂ ಯಾವತ್ತೂ ಸೊಪ್ಪು ಹಾಕು­ವುದಿಲ್ಲ’ ಎಂದು ಸಂಸದ ಡಿ.ಕೆ.ಸುರೇಶ್‌ ಗುಡುಗಿದರು.

ಕೋಡಿಹಳ್ಳಿ ಹೋಬಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಪಹಣಿ ತಿದ್ದುಪಡಿ ಆಂದೋಲನ ಮತ್ತು ಕಂದಾಯ ಇಲಾ­ಖೆಯ ವಿವಿಧ ಸವಲತ್ತುಗಳನ್ನು ನೀಡುವ ಕಾರ್ಯ­ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕ್ಷೇತ್ರದ ಜನತೆಯ ಋಣ ತೀರಿಸಲು ನಾನು ಮತ್ತು ಸಚಿವ ಡಿ.ಕೆ.ಶಿವಕುಮಾರ್ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು. ಜಮೀನಿಗೆ ಸಂಬಂಧಸಿದಂತೆ ಕಂದಾಯ ಇಲಾಖೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಮುಂದೆ ಕಂದಾಯ ಇಲಾಖೆಗೆ ಅರ್ಜಿ ನೀಡಿ ಅಧಿಕಾರಗಳ ಬಳಿ ಅಲೆಯುವಂತಿಲ್ಲ.

ಅದಕ್ಕಾಗಿಯೇ ಪಹಣಿಯಲ್ಲಿ ಆಗಿರುವ ಲೋಷ­ದೋಷವನ್ನು ಸರಿಪಡಿಸಲು ತಿದ್ದುಪಡಿ ಆಂದೋ­ಲ­ವನ್ನು ಹೋಬಳಿ ಮಟ್ಟದಲ್ಲಿ ಮಾಡಲಾಗುತ್ತಿದೆ. ಇನ್ನು 15 ದಿನಗಳ ಒಳಗಾಗಿ ತಿದ್ದುಪಡಿ ಮಾಡಿ­ಕೊ­ಡಲಾಗುವುದು ಎಂದರು.
ಆಂದೋಲನದಲ್ಲಿ 1532 ಮಂದಿಗೆ ವಿವಿಧ ಯೋಜನೆಗಳ ಮಂಜೂರಾತಿ ಆದೇಶಪತ್ರ ವಿತ­ರಿಸಲಾಯಿತು. 1120 ಪಹಣಿಗಳ ತಿದ್ದುಪಡಿ ಮಾಡಲಾಯಿತು. 300 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಕೆಲವನ್ನು ಸ್ಥಳದಲ್ಲೇ ಪರಿಶೀಲಿಸಿ ಸರಿಯಾಗಿರುವ ಅರ್ಜಿಗಳಿಗೆ ಮಂಜೂ­ರಾತಿ ನೀಡಿ ಅದೇಶ ಪತ್ರ ವಿತರಿಸ­ಲಾಯಿತು. ಜಿಲ್ಲಾಧಿಕಾರಿ ಡಾ. ವಿಶ್ವನಾಥ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಾಸನ್ ಐ.ಕೇರ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಿದೇವ್ರು, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಇಕ್ಬಾಲ್ ಹುಸೇನ್,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಿದ್ದಿಕ್ ಪರ್ವಿನ್, ಉಪಾಧ್ಯಕ್ಷ ಲೋಕೇಶ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯದೇವು, ಕೆ.ಎನ್.ದಿಲೀಪ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಜೆ.ನಟರಾಜು, ಉಪ–ವಿಭಾಗಾಧಿಕಾರಿ ಸಿದ್ದಪ್ಪ, ತಹಶೀಲ್ದಾರ್ ಡಾ.ದಾಕ್ಷಾಯಿಣಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾ. ಪಂ. ಸದಸ್ಯರು, ಪಕ್ಷದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.