ADVERTISEMENT

‘ಡಿಕೆಶಿ ಕುಟುಂಬಕ್ಕೆ ನಿರಂತರ ಅಧಿಕಾರ’

ಸಂವಿಧಾನ ಆಶಯದಂತೆ ಅಧಿಕಾರ ಹಂಚಿಕೆಯಾಗಲಿ: ಜೆಡಿಎಸ್ – ಬಿಎಸ್ಪಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 9 ಮೇ 2018, 13:32 IST
Last Updated 9 ಮೇ 2018, 13:32 IST

ಉಯ್ಯಂಬಳ್ಳಿ(ಕನಕಪುರ): 'ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಂದ ಶಿವಕುಮಾರ್‌ ಕುಟುಂಬಕ್ಕೆ ಅಧಿಕಾರ ಕೊಡುತ್ತಾ ಬಂದಿದ್ದೀರಾ, ನಿಮ್ಮ ಸೇವೆ ಮಾಡಲು ಈ ಬಾರಿ ನನಗೂ ಒಂದು ಅವಕಾಶ ನೀಡಿ ಎಂದು’ ಜೆಡಿಎಸ್‌ ಅಭ್ಯರ್ಥಿ ನಾರಾಯಣಗೌಡ ಮತದಾರರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯ ಹಾರೋಶಿವನಹಳ್ಳಿ, ನಲ್ಲಹಳ್ಳಿದೊಡ್ಡಿ, ಚುಂಚಿ ಕಾಲೊನಿ, ವಡಕೆಕಟ್ಟೆ, ಹೆಗ್ಗನೂರು ಗ್ರಾಮಗಳಲ್ಲಿ ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

‘ರೈತ ಕುಟುಂಬದಿಂದ ಬಂದು ರಾಜಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದ್ದೇನೆ. ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಮೂರನೆ ಬಾರಿಗೆ ದೇವೇಗೌಡರೇ ಕರೆದು ಟಿಕೆಟ್‌ ನೀಡಿ ಈ ಬಾರಿ ಜನರು ನಿನ್ನ ಕೈ ಹಿಡಿಯುತ್ತಾರೆ. ಒಬ್ಬ ರೈತನ ಮಗ ಗೆಲ್ಲಬೇಕುನ್ನುವುದಾದರೆ ಖಂಡಿತ ನಿನಗೆ ಮತ ನೀಡುತ್ತಾರೆ ಎಂದು ಧೈರ್ಯ ತುಂಬಿದ್ದಾರೆ’ ಎಂದರು.

ADVERTISEMENT

‘ಹಣದಿಂದ ನಾನು ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಶಿವಕುಮಾರ್‌ ಕುಟುಂಬಕ್ಕೆ ಎಲ್ಲಾ ಅಧಿಕಾರ ಸಿಕ್ಕಿದೆ. ಆದರೆ, ನನಗೆ ಯಾವ ಅಧಿಕಾರವೂ ಸಿಕ್ಕಿಲ್ಲ. ಒಂದು ಅವಕಾಶ ಕೊಟ್ಟರೆ ರೈತನ ಮಗನಾಗಿ ನಿಮ್ಮ ಸೇವೆ ಮಾಡುತ್ತೇನೆ’ ಎಂದು ಪ್ರಚಾರ ನಡೆಸಿದರು.

ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಕ್ರಮಗಳು ಇಂದಿಗೂ ಜನಮಾಸದಲ್ಲಿ ಉಳಿದಿದ್ದು ಜೆಡಿಎಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಬಿಎಸ್‌ಪಿ ಮುಖಂಡರಾದ ಮಲ್ಲಿಕಾರ್ಜುನ್‌ ಮತ್ತು ನೀಲಿ ರಮೇಶ್‌ ಮಾತನಾಡಿ, ಕಾಂಗ್ರೆಸ್‌ ಲೂಟಿಕೋರ ಮತ್ತು ಬಡವರ ವಿರೋಧಿ ಪಕ್ಷ. ಬಿಜೆಪಿ ಕೋಮುವಾದಿ ಮತ್ತು ಹಗರಣಗಳ ಪಕ್ಷ. ಆ ಕಾರಣದಿಂದ ಎರಡು ಪಕ್ಷವನ್ನು ದೂರವಿಟ್ಟು ಜನಪರವಾದ ಜೆಡಿಎಸ್‌ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್‌ ಶಾಸಕರಾಗಿ, ಸಹೋದರ ಡಿ.ಕೆ.ಸುರೇಶ್‌ ಸಂಸದರಾಗಿ, ಅವರ ಸಂಬಂಧಿ ಎಸ್‌.ರವಿ ವಿಧಾನ ಪರಿಷತ್‌ ಸದಸ್ಯರಾಗಿ, ಅವರ ಕುಟುಂಬದವರೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದಾರೆ. ಪ್ರಮುಖ ರಾಜಕೀಯ ಹುದ್ದೆಗಳು ಹಾಗೂ ಅಧಿಕಾರ ಶಿವಕುಮಾರ ಕುಟುಂಬದ ಹಿಡಿತದಲ್ಲಿಯೇ ಇದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದ ಜನರಿಗೆ ಸಾಮಾಜಿಕ ನ್ಯಾಯವಾಗಲಿ ದಕ್ಕಿಲ್ಲ. ಸಂವಿಧಾನ ಆಶಯದಂತೆ ಅಧಿಕಾರ ಹಂಚಿಕೆಯಾಗಬೇಕು. ಬೇರೆಯವರಿಗೂ ಅಧಿಕಾರ ಸಿಗಬೇಕು. ಆ ಕಾರಣದಿಂದ ಈ ಬಾರಿ ನಾರಾಯಣಗೌಡರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಪಿ.ರತ್ನಮ್ಮ, ಪಕ್ಷದ ಮುಖಂಡರಾದ ಸಿದ್ದಮರೀಗೌಡ, ತುಂಗಣಿಪುಟ್ಟಸ್ವಾಮಿ, ಪಂಚಲಿಂಗೇಗೌಡ, ಹೆಗ್ಗನೂರು ಶಿವಕುಮಾರ್‌, ಶೆಟ್ಟಿಕೆರೆದೊಡ್ಡಿ ರಾಜು, ಬೆಂಕಿ ಶ್ರೀಧರ್‌, ಮಹೇಶ್‌, ಸುರೇಶ್‌, ಪಿಳ್ಳೇಗೌಡ, ಕಾಳೇಗೌಡ, ಪುಟ್ಟಮಾದೇಗೌಡ, ಭೈರಣ್ಣ, ಜೈರಾಮು, ಜೈರಾಮೇಗೌಡ, ಮುತ್ತು, ಶೋಭ, ಗೌರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.