ADVERTISEMENT

ತಿಮ್ಮಪ್ಪನ ಸನ್ನಿಧಿಯಲ್ಲಿ ಮೋಜು ಮಸ್ತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 8:58 IST
Last Updated 14 ಅಕ್ಟೋಬರ್ 2017, 8:58 IST
ಕೂಟಗಲ್‌ ಬೆಟ್ಟದ ಮೇಲಿರುವ ಇತಿಹಾಸ ಪ್ರಸಿದ್ಧ ತಿಮ್ಮಪ್ಪನ ದೇವಸ್ಥಾನ
ಕೂಟಗಲ್‌ ಬೆಟ್ಟದ ಮೇಲಿರುವ ಇತಿಹಾಸ ಪ್ರಸಿದ್ಧ ತಿಮ್ಮಪ್ಪನ ದೇವಸ್ಥಾನ   

ಕೂಟಗಲ್‌ (ರಾಮನಗರ): ಕೂಟಗಲ್ ಗ್ರಾಮದ ಬಳಿಯಿರುವ ಇತಿಹಾಸ ಪ್ರಸಿದ್ಧ ತಿಮ್ಮಪ್ಪನ ಸನ್ನಿಧಿ ಅನೈತಿಕ ಚಟುವಟಿಕೆ ಮತ್ತು ಮೋಜು ಮಸ್ತಿಯ ತಾಣವಾಗಿದೆ. ಸಾವಿರಾರು ಭಕ್ತರನ್ನು ಹೊಂದಿರುವ ದೇವಸ್ಥಾನದ ಪಾವಿತ್ರ್ಯತೆಯು ಜೂಜು, ಮೋಜಿನ ಮೋಹಕ್ಕೆ ಬಿದ್ದವರ ಆಟಾಟೋಪದಿಂದ ಹಾಳಾಗುತ್ತಿದೆ.

ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಕೂಟಗಲ್ ತಿಮ್ಮಪ್ಪನ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕಣ್ವ ಋಷಿಗಳು ಇಲ್ಲಿಯ ತಿಮ್ಮಪ್ಪನನ್ನು ಪೂಜಿಸುತ್ತಿದ್ದರು ಎಂಬುದು ಭಕ್ತರ ನಂಬಿಕೆಯಾಗಿದ್ದು, ರಾಮನಗರ, ಚನ್ನಪಟ್ಟಣ, ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಲಂಬವಾಗಿ ನಿಂತಿರುವ ಕೂಡಗಲ್ ಬೆಟ್ಟಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರಕೃತಿಯ ರಮಣೀಯ ಸೊಬಗನ್ನು ಸವಿಯಲು ಬರುವ ಪ್ರವಾಸಿಗರು ಇಲ್ಲಿನ ಪರಿಸರವನ್ನು ಮಾಲಿನ್ಯಗೊಳಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ADVERTISEMENT

ಎಲ್ಲಿ ನೋಡಿದರೂ ಗಾಜು: ತಿಮ್ಮಪ್ಪನನ್ನು ಪೂಜಿಸಲು ಬರುವ ಭಕ್ತರಿಗಿಂತ ಮೋಜು ಮಸ್ತಿ ಮಾಡಲು ಬರುವವರೇ ಹೆಚ್ಚಾಗುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಮದ್ಯದ ಬಾಟಲ್ ಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳೊಂದಿಗೆ ಬರುವ ಕಿಡಿಗೇಡಿಗಳು ಮದ್ಯ ಸೇವಿಸಿದ ನಂತರ ಬಾಟಲ್‍ ಗಳನ್ನು ಒಡೆದು ಚೂರು ಮಾಡಿದ್ದು, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ.

‘ತಿಮ್ಮಪ್ಪನ ಸನ್ನಿಧಿ ಒಂದೆಡೆ ಮದ್ಯ ಪ್ರಿಯರಿಗೆ ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಮಾರ್ಪಟ್ಟಿದೆ. ಲಕ್ಷಾಂತರ ಮಂದಿಗೆ ಧಾರ್ಮಿಕವಾಗಿ ಪವಿತ್ರ ಕ್ಷೇತ್ರವಾಗಿರುವ ತಿಮ್ಮಪ್ಪನ ಸನ್ನಿಧಿಯಲ್ಲಿ ಇಷ್ಟೆಲ್ಲಾ ಅನಾಚಾರಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ಕೂಟಗಲ್‌ ಶ್ರೀನಿವಾಸ್‌.

‘ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಪೊಲೀಸರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂರುತ್ತಾರೆ.

ನೂತನ ಬೀಟ್ ವ್ಯವಸ್ಥೆ ಪ್ರಕಾರ ಪ್ರತಿ ಊರಿಗೊಬ್ಬ ಕಾನ್‌ಸ್ಟೆಬಲ್‌ ಅನ್ನು ನೇಮಿಸಲಾಗಿದೆ. ಈ ಊರಿನಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಆತನನ್ನೇ ಹೊಣೆಗಾರನನ್ನಾಗಿಸಲಾಗಿದೆ. ಈ ಊರಿನಲ್ಲಿರುವ ಮನೆಗಳ ಸಹಿತ, ಅಂಗಡಿಗಳು, ಪ್ರವಾಸಿ ತಾಣಗಳು, ದೇವಸ್ಥಾನಗಳು ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಪ್ರತಿ ತಿಂಗಳು ಸಭೆ ನಡೆಸಿ ಸಮಸ್ಯೆ ಆಲಿಸಬೇಕು ಎಂಬ ದೂರು ಸ್ಥಳೀಯರದು.

ನೂತನ ಬೀಟ್ ವ್ಯವಸ್ಥೆ ಜಾರಿಗೆ ಬಂದು ತಿಂಗಳುಗಳೇ ಕಳೆದರೂ ಇದುವರೆಗೆ ಸಂಬಂಧಪಟ್ಟ ಸಿಬ್ಬಂದಿ ಒಂದು ಬಾರಿಯೂ ಗ್ರಾಮಸ್ಥರ ಸಭೆ ನಡೆಸಿಲ್ಲ. ಇದರಿಂದಾಗಿ ಗ್ರಾಮದ ಕೆಲವು ಕಿರಾಣಿ ಅಂಗಡಿಗಳೇ ಬಾರ್ ಅಂಡ್ ರೆಸ್ಟೋರೆಂಟ್‍ ಗಳಾಗಿ ಮಾರ್ಪಟ್ಟಿವೆ ಎಂದು ಸ್ಥಳೀಯರು ದೂರುತ್ತಾರೆ.

‘ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಯಾಗಬೇಕಿದ್ದ ಕೂಟಗಲ್ ತಿಮ್ಮಪ್ಪನ ಬೆಟ್ಟ, ಇತ್ತೀಚಿನ ದಿನಗಳಲ್ಲಿ ಅಕ್ರಮ ಚಟುವಟಿಕೆ ಹಾಗೂ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಕಂಠಪೂರ್ತಿ ಕುಡಿದು ಖಾಲಿ ಬಾಟಲ್‍ ಗಳನ್ನು ಬೆಟ್ಟದ ಮೇಲೆಲ್ಲಾ ಒಡೆದು ಹಾಕಿದ್ದಾರೆ’ ಎನ್ನುತ್ತಾರೆ ಹೊಸೂರಿನ ಬಿ. ಶ್ರೀಧರ್.

‘ವಾರಾಂತ್ಯದಲ್ಲಿ ಅನೈತಿಕ ಚಟುವಟಿಕೆಗಳು ವಿಪರೀತವಾಗಿ ನಡೆಯುತ್ತವೆ. ಬೆಟ್ಟಕ್ಕೆ ಬರುವ ಮದ್ಯ ಮತ್ತು ಅನೈತಿಕ ಚಟುವಟಿಕೆಯಲ್ಲಿ ತೊಡಗುವ ಪ್ರೇಮಿಗಳಿಗೆ ಪೊಲೀಸರು ಕಡಿವಾಣ ಹಾಕುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

‘ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿರುವುದರಿಂದ ಇಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿದರೆ ಆರ್ಥಿಕಾಭಿವೃದ್ಧಿ ಹೆಚ್ಚುತ್ತದೆ. ಜತೆಗೆ ಪೌರಾಣಿಕ, ಐತಿಹಾಸಿಕ ಸ್ಥಳಗಳನ್ನು ರಕ್ಷಿಸಿದಂತಾಗುತ್ತದೆ. ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸಿದರೆ ಪ್ರವಾತಿ ತಾಣಗಳ ಅಭಿವೃದ್ಧಿ ಸಾಧ್ಯ’ ಎನ್ನುತ್ತಾರೆ ಸಂಶೋಧಕ ಚಿಕ್ಕಚನ್ನಯ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.