ADVERTISEMENT

ದಲಿತರ ಶೋಷಣೆ: ನಿರ್ಲಕ್ಷ್ಯಕಾರಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ರಾಮನಗರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯನ್ನು ಆರೋಪಿಗಳಿಗಿಂತ ಹೆಚ್ಚಾಗಿ ಅಧಿಕಾರಿಗಳೇ ಉಲ್ಲಂಘಿಸುತ್ತಿದ್ದಾರೆ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ದೂರಿದರು.

ರಾಜ್ಯದಲ್ಲಿ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳದ ಕಾರಣ ದಿನೇ ದಿನೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅಧಿಕಾರಿಗಳು ಮತ್ತು ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣವಾಗಿದೆ ಎಂದು ಅವರು ಭಾನುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2011ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ದಲಿತ ಮೇಲೆ ಎಂತಹದೇ ದೌರ್ಜನ್ಯ ಪ್ರಕರಣಗಳು ನಡೆದರೆ ಅದರ ನೇರ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರದ್ದಾಗಿರುತ್ತದೆ. ಆರೋಪಿಯನ್ನು ರಕ್ಷಿಸುವವರನ್ನು ಜೈಲಿಗೆ ಕಳುಹಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೂ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಎಂದು ಅವರು ಕಿಡಿಕಾರಿದರು.

ರಾಜ್ಯ ಸರ್ಕಾರದಲ್ಲಿ ಆಡಳಿತದ ವೈಫಲ್ಯದಿಂದ ದಲಿತರ ಮೇಲೆ ಶೋಷಣೆ ಮತ್ತು ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕಿರುಗಾವಲು ಪ್ರಕರಣ ಸೇರಿದಂತೆ ಸಾಕಷ್ಟು ಪ್ರಕರಣಗಳಲ್ಲಿ ಒತ್ತಡ ಹೇರುವ ಕೆಲಸಗಳು ನಡೆಯುತ್ತಿವೆ. ಆರೋಪಿಗಳನ್ನು ರಕ್ಷಿಸುವ ಕೆಲಸವನ್ನು ಮಾಡುವ ಮೂಲಕ ಅಧಿಕಾರಿ ವರ್ಗದವರು ಎಸ್.ಸಿ/ಎಸ್.ಟಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ದಲಿತರ ಮೇಲೆ ಶೋಷಣೆ ಆಗುತ್ತಿರುವುದಕ್ಕೆ ಮುಖ್ಯಮಂತ್ರಿ ಅವರೇ ಕಾರಣರಾಗಿದ್ದಾರೆ. ಸಮರ್ಥವಾಗಿ ಆಡಳಿತ ನಡೆಸದ ಕಾರಣ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದ ಅವರು, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಕೂಡಲೇ ಉನ್ನತ ಮಟ್ಟದ ಸಮಿತಿಯ ಸಭೆ ಕರೆದು ರಾಜ್ಯದ ಎಲ್ಲ ಡಿ.ಸಿ ಮತ್ತು ಎಸ್.ಪಿಗಳ ಜತೆ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಒಂದು ವಾರದೊಳಗೆ ಮುಖ್ಯಮಂತ್ರಿಯವರು ಉನ್ನತ ಮಟ್ಟದ ಸಭೆ ಕರೆಯದೆ ಹೋದರೆ, ಸಿ.ಎಂ ಮನೆಯನ್ನು ಘೇರಾವ್ ಹಾಕಲಾಗುವುದು. ನಂತರ ಸಿ.ಎಂ ಹೋಗುವ ಕಾರ್ಯಕ್ರಮಗಳಲ್ಲಿ ಅವರನ್ನು ಘೇರಾವ್ ಹಾಕಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

ಬಿ.ಎಸ್.ವೈ ಬಂಧನ- ಸ್ವಾಗತ: ಭೂ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದು ಸ್ವಾಗತಾರ್ಹ ಎಂದ ಅವರು, ಅದೇ ರೀತಿ ರಾಜ್ಯದ ಗಣಿಯನ್ನು ಲೂಟಿ ಮಾಡಲು ಅವಕಾಶ ನೀಡಿದ ಮಾಜಿ ಸಿ.ಎಂಗಳಾದ ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಎಸ್.ಎಂ.ಕೃಷ್ಣ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸದಾನಂದ ಗೌಡ ಅವರು ಕೂಡಲೇ ಲೋಕಾಯುಕ್ತ ವರದಿಯನ್ನು ಅಂಗೀಕರಿಸಬೇಕು. ಆ ಮೂಲಕ ವರದಿಯಲ್ಲಿ ದಾಖಲಾಗಿರುವ ಎಲ್ಲರಿಗೂ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಗೋವಿಂದಯ್ಯ ಮಾತನಾಡಿ, ಜಿಲ್ಲೆಯಲ್ಲಿಯೂ ಹಲವೆಡೆ ದಲಿತರ ಮೇಲೆ ದೌರ್ಜನ್ಯಗಳು ನಡೆದಿವೆ. ಆದರೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ಮೂತಿವರೆಸುವ ಕೆಲಸ ಮಾಡಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ಕೆಲಸವನ್ನು ಜಿಲ್ಲಾಡಳಿತ ನಡೆಸಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ ಅವರು ರಾಮನಗರಕ್ಕೆ ವರ್ಗಾ ಆಗಿ ಬಂದಾಗಿನಿಂದ ಒಮ್ಮೆಯೂ ದಲಿತರ ಸಭೆಯನ್ನು ಕರೆದು ಚರ್ಚಿಸಿಲ್ಲ ಎಂದು ಅವರು ಆರೋಪಿಸಿದರು. ಸಮತಾ ಸೈನಿಕ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಕುಮಾರ್, ಮುಖಂಡರಾದ ಗುರುಮಲ್ಲಯ್ಯ, ಆದಿತ್ಯ, ಹೇಮಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.