ADVERTISEMENT

ನಗರದೇವತೆ ಚಾಮುಂಡೇಶ್ವರಿ ಕರಗಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 5:25 IST
Last Updated 10 ಜುಲೈ 2012, 5:25 IST
ನಗರದೇವತೆ ಚಾಮುಂಡೇಶ್ವರಿ ಕರಗಕ್ಕೆ ಕ್ಷಣಗಣನೆ
ನಗರದೇವತೆ ಚಾಮುಂಡೇಶ್ವರಿ ಕರಗಕ್ಕೆ ಕ್ಷಣಗಣನೆ   

ರಾಮನಗರ: ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ನಗರ ವಿಶಿಷ್ಟ ಬಗೆಯ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ.

ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಮೂರ್ತಿಗೆ ವಿವಿಧ ಬಗೆಯ ಅಲಂಕಾರಗಳಿಂದ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ದೇವಿಯನ್ನು ಪೂಜಿಸುತ್ತಾ ಬಂದಿರುವ ಪದ್ಮನಾಭ ಸಿಂಗ್ ಅವರ ಪುತ್ರ ದೇವಿ ಪ್ರಸಾದ್ ಸಿಂಗ್ ಅವರು ಈ ಸಾರಿಯೂ ಕರಗಧಾರಣೆ ಮಾಡಲಿದ್ದಾರೆ. ಐದು ವರ್ಷಗಳಿಂದ ಅವರೇ ಕರಗಧಾರಣೆ ಮಾಡಿಕೊಂಡು ಬಂದಿದ್ದಾರೆ. ಅವರ ತಂದೆ ಪದ್ಮನಾಭ ಸಿಂಗ್ ಅವರು ಅದಕ್ಕೂ ಹಿಂದೆ 25 ವರ್ಷಗಳ ಕಾಲ ಸತತವಾಗಿ ಕರಗಧಾರಣೆ ಮಾಡಿ ಅಗ್ನಿಕುಂಡ ಪ್ರವೇಶಿಸಿದ್ದಾರೆ.

ಮಂಗಳವಾರ ರಾತ್ರಿ 10 ಗಂಟೆಗೆ ಹಸಿ ಕರಗವು ದೇವಾಲಯದಿಂದ ಹೊರಟು ದ್ಯಾವರಸೇಗೌಡನದೊಡ್ಡಿಯ ದೇವಾಲಯ ಸೇರಲಿದೆ. ಅಲ್ಲಿ ಕರಗಧಾರಣೆ ಮಾಡಿಕೊಂಡು ಮೆರವಣಿಗೆ ಆರಂಭವಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬುಧವಾರ ಬೆಳಿಗ್ಗೆ ಅಗ್ನಿಕೊಂಡ ಪ್ರವೇಶ ಮಾಡುವ ಮೂಲಕ ದೇವಾಲಯವನ್ನು ಸೇರಲಿದೆ.

ಚಾಮುಂಡೇಶ್ವರಿ ಕರಗದ ದಿನದಂದೇ ನಗರದಲ್ಲಿನ ಸಪ್ತ ಮಾತೃಕೆಗಳ ಕರಗಗಳೂ ನೆರವೇರಲಿವೆ. ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿದೇವಿ, ತೋಪ್‌ಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲುಮಾರಮ್ಮ, ಕೊಲ್ಲಾಪುರದಮ್ಮ, ಭಂಡಾರದಮ್ಮ, ಮಗ್ಗದಕೇರಿ ಮಾರಮ್ಮ ಹಾಗೂ ಐಜೂರಿನ ಆಧಿಪರಾಶಕ್ತಿ ಮಾರಮ್ಮನ ಕರಗಗಳೂ ನಡೆಯಲಿವೆ.

ಮನರಂಜನಾ ಕಾರ್ಯಕ್ರಮಗಳು:
ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಮಿತಿಯು ಜಿಲ್ಲಾ ಕ್ರೀಡಾಂಗಣದಲ್ಲಿ ಬಾಣ- ಬಿರುಸುಗಳ ಪ್ರದರ್ಶನ ಮತ್ತು ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಾರಥ್ಯದಲ್ಲಿ ರಸಸಂಜೆ ಜರುಗಲಿದೆ. ಇದಕ್ಕೆ ಈಗಾಗಲೇ ಆಕರ್ಷ ವೇದಿಕೆಯೂ ಸಜ್ಜಾಗಿದೆ.
 
ಕರಗ ಪ್ರಯುಕ್ತ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಬಗೆಯ ಆಟಿಕಾ ಸಾಮಗ್ರಿಗಳ ಪ್ರದರ್ಶನ ಏರ್ಪಡಿಸಿದೆ.ಚಾಮುಂಡೇಶ್ವರಿ ಯುವ ಸೇವಾ ಸಮಿತಿಯು ನಗರದ ಅರಳೀಮರ ವೃತ್ತದಲ್ಲಿ ಸಂಜೆ 6 ಗಂಟೆಗೆ ಶ್ರೀನಿವಾಸ್ ಮ್ಯೂಸಿಕ್ ಅಂಡ್ ಮೆಲೋಡಿಸ್ ತಂಡದಿಂದ ರಸ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದರ ಜೊತೆಗೆ ವಿಡಿಯೊ ಚಿತ್ರೀಕರಣ ಕೂಡ ಮಾಡಲಾಗುತ್ತಿದ್ದು, ಸಾರ್ವಜನಿಕರ ತುರ್ತು ಸಂಪರ್ಕಕಾಗಿ ನಿಯಂತ್ರಣ ಕೊಠಡಿ ಕೂಡ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಡಿಎಸ್‌ಪಿ ರಾಮಕೃಷ್ಣಪ್ಪ, ಇತರೇ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.