ADVERTISEMENT

ನನಗೆ ಕ್ಷೇತ್ರದ ಜನರ ಬಲವಿದೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 7:45 IST
Last Updated 16 ಜೂನ್ 2012, 7:45 IST
ನನಗೆ ಕ್ಷೇತ್ರದ ಜನರ ಬಲವಿದೆ: ಡಿಕೆಶಿ
ನನಗೆ ಕ್ಷೇತ್ರದ ಜನರ ಬಲವಿದೆ: ಡಿಕೆಶಿ   

ಕನಕಪುರ: `ನನ್ನ ಏಳಿಗೆಯನ್ನು ಕಂಡು ಕರುಬುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪಿ.ಜಿ.ಆರ್.ಸಿಂಧ್ಯಾ ನನ್ನ ವಿರುದ್ಧ ವಿಫಲ ಷಡ್ಯಂತ್ರಗಳನ್ನು ಕಾಲಕಾಲಕ್ಕೆ ರೂಪಿಸುತ್ತಲೇ ಬಂದಿದ್ದಾರೆ~ ಎಂದು ಶಾಸಕ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ತಾಲ್ಲೂಕಿನ ಕೋಡಿಹಳ್ಳಿಯ ಶಾರದಾ ಹೈಸ್ಕೂಲ್ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದ ಜನತೆಯ ಆಶೀರ್ವಾದ ಇರುವ ತನಕ ನನಗೆ ಯಾರೂ ಏನು ಮಾಡಲು ಸಾಧ್ಯವಿಲ್ಲವೆಂದು ಹೇಳಿದರು. 

 ಕ್ಷೇತ್ರದ ಮತದಾರರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದೆೀನೆ. ಆದರೆ ಅದನ್ನು ಸಹಿಸದ ಕುಮಾರಸ್ವಾಮಿ ತಮ್ಮ ಕಾರ್ಯಕರ್ತರನ್ನು ಬಳಸಿಕೊಂಡು ಯಡಿಯೂರಪ್ಪ ಮತ್ತು ನನ್ನ ವಿರುದ್ಧ ಈ ಹಿಂದೆ ಕೇಸು ದಾಖಲಿಸಿದ್ದರು ಎಂದರು.

ಸಿಂಧ್ಯಾ ಅನೇಕ ಬಾರಿ ಶಾಸಕರಾಗಿ, ವಿವಿಧ ಖಾತೆಗಳ ಸಚಿವರಾಗಿ 26 ವರ್ಷಗಳ ರಾಜಕೀಯ ಜೀವನ ನಡೆಸಿದ್ದಾರೆ. ಆದರೆ ಅವರೊಬ್ಬ ಸುಳ್ಳಿನ ಕಂತೆಯ ಸರದಾರ. ಬರಿ ಸುಳ್ಳು ಹೇಳಿಕೊಂಡೇ ಇಷ್ಟೂ ದಿನಗಳ ಕಾಲ ಕ್ಷೇತ್ರದ ಜನತೆಯನ್ನು ವಂಚಿಸುತ್ತಾ ಬಂದಿದ್ದಾರೆ.
 
ಅವರ ಈ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆಂಬುದು ಕ್ಷೇತ್ರ ಪ್ರವಾಸ ಮಾಡುತ್ತಿರುವ ಅವರಿಗೇ ತಿಳಿಯುತ್ತದೆ. ಅವರ ಪಕ್ಷದ ಮುಖಂಡರೇ ಪ್ರಧಾನಮಂತ್ರಿಯಾಗಿ ಅಧಿಕಾರ ಚಲಾಯಿಸಿದ್ದರೂ ಆಗ ಈ ತಾಲ್ಲೂಕಿಗೆ ಏನು ಮಾಡಲಾಗದವರು ಮುಂದೆ ಏನು ಮಾಡುತ್ತಾರೆಂದು ಕಿಚಾಯಿಸಿದರು.

ನಾನು ಕನಕಪುರ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಕೇವಲ 4 ವರ್ಷಗಳಲ್ಲಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸ್ದ್ದಿದೇನೆ. 1 ಸಾವಿರಕ್ಕೂ ಹೆಚ್ಚು ಮಂದಿಗೆ ವೃದ್ಧಾಪ್ಯ ವೇತನವನ್ನು ಸ್ವಂತ ಖರ್ಚಿನಿಂದ ಕೊಡಿಸಿದ್ದೇನೆ. ತಾಲ್ಲೂಕನ್ನು ಗುಡಿಸಲು ಮುಕ್ತಮಾಡಲು ಈಗಾಗಲೇ 8 ಸಾವಿರ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಗಿದೆ.

ಕೊಳಚೆ ನಿರ್ಮೂಲನಾ ಮಂಡಳಿಯಿಂದ 2 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಜೊತೆಗೆ ನಿವೇಶನ ಇಲ್ಲದವರಿಗಾಗಿ 54 ಎಕರೆ ಭೂಮಿಯನ್ನು ಸ್ವಂತವಾಗಿ ಖರೀದಿ ಮಾಡಿದ್ದು ಅವುಗಳಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸಲು ಯೋಜಿಸಿದ್ದೇನೆ ಎಂದು ಹೇಳಿದರು. 

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ ಮಾತನಾಡಿ, ಜೆಡಿಎಸ್‌ನವರು ಈ ಕ್ಷೇತ್ರದಲ್ಲಿ ಮಾಡಲಾಗದಂತಹ ಅಭಿವೃದ್ಧಿ ಕೆಲಸಗಳನ್ನು ಶಿವಕುಮಾರ್ ವಿರೋಧ ಪಕ್ಷದಲ್ಲಿದ್ದರೂ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ  ಜಿಯಾವುಲ್ಲಾ ಮಾತನಾಡಿ, ಜೆಡಿಎಸ್ ಮುಖಂಡರು ಅಧಿಕಾರಕ್ಕೆ ಬಂದರೆ ರೈತರ ಬಡ್ಡಿ ಸಾಲ ಮನ್ನಾ ಮಾಡುತ್ತೇವೆ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕೆಪಿಸಿಸಿ ಸದಸ್ಯ ಎಚ್.ಕೆ. ಶ್ರಿಕಂಠು, ಸೂರನಹಳ್ಳಿ ಜಯರಾಮು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ, ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಪರಾಜು ಮೊದಲಾದವರು  ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ಕೆ.ಎನ್.ದಿಲೀಪ್, ಪುರಸಭೆ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಇಕ್ಬಾಲ್ ಹುಸೇನ್ ,ಲಕ್ಷ್ಮಮ್ಮ, ಮಾದೇವಿ, ವೆಂಕಟೇಶ್, ಮುಖಂಡರಾದ ವಿ.ಶ್ರಿನಿವಾಸ್, ಸಿದ್ದರಾಜು, ಎಚ್.ಕೆ. ನಾಗರಾಜು, ಎಂ.ಪುರುಷೋತ್ತಮ್, ವಿಶ್ವನಾಥ್, ಎಸ್.ಎಸ್. ಶಂಕರ್, ಮಾದೇಶ, ಯಲವಳ್ಳಿ ನಾಗರಾಜು, ಬಸಪ್ಪ, ನಟರಾಜು ಇತರರು ಇದ್ದರು.

ಜನ್ಮದಿನೋತ್ಸವ: ಇದೇ ಸಂದರ್ಭದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ಗಣ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಆಚರಿಸಿ ನೆಚ್ಚಿನ ನಾಯಕನಿಗೆ ಶುಭ ಕೋರಿದರು.

ಯುವ ಕಾಂಗ್ರೆಸ್‌ನ ಸುಮಾರು ಎರಡು ಸಾವಿರ ಯುವಕರು ಕೆಂಪರಾಜು ನೇತೃತ್ವದಲ್ಲಿ ತೊಪ್ಪಗನಹಳ್ಳಿ ಗ್ರಾಮದಿಂದ ಬೈಕ್ ರ‌್ಯಾಲಿ ಹೊರಟು ಕನಕಪುರ ಪಟ್ಟಣದ ಎಂ.ಜಿ.ರಸ್ತೆಯ ಮೂಲಕ ಕೋಡಿಹಳ್ಳಿಯ ಶಾರದಾ ಹೈಸ್ಕೂಲ್ ಅವರಣದಲ್ಲಿ ಜಮಾವಣೆಗೊಂಡರು.

`ರಾಜ್ಯ, ತಾಲ್ಲೂಕಿನಲ್ಲಿ ಭೀಕರ ಬರಗಾಲ ಇರುವುದರಿಂದ ಹುಟ್ಟುಹಬ್ಬವನ್ನು ಆಚರಿಸದಂತೆ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಸೂಚನೆ ನೀಡಿದ್ದರೂ ಅವರು ನನ್ನ ಮಾತನ್ನು ಮೀರಿ ಬಹುತೇಕ ಕಡೆ ಹುಟ್ಟುಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು~ ಎಂದು ಶಿವಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.