ADVERTISEMENT

ನ.2ರಂದು ಶಾಸಕ ಯೋಗೇಶ್ವರ್‌ ಬಿಜೆಪಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 9:26 IST
Last Updated 29 ಅಕ್ಟೋಬರ್ 2017, 9:26 IST
ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌   

ರಾಮನಗರ: ಬೆಂಗಳೂರಿನಲ್ಲಿ ‘ನವೆಂಬರ್ 2ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದೇನೆ’ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

‘ಕಳೆದ ಇಪ್ಪತ್ತು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸುಮಾರು 18 ವರ್ಷ ಕಾಲ ಪ್ರತ್ಯಕ್ಷ–ಪರೋಕ್ಷವಾಗಿ ಕಾಂಗ್ರೆಸ್‌ ಪರ ನಿಂತಿದ್ದೆ. ಆದರೆ, ಬಿಜೆಪಿಯಲ್ಲಿ ಇದ್ದ ಕೇವಲ ಎರಡು ವರ್ಷ ಅವಧಿಯೇ ನನಗೆ ಹೆಚ್ಚು ಸಾರ್ಥಕತೆ  ತಂದಿದೆ. ಹೀಗಾಗಿ ನನ್ನ ಮಾತೃ ಪಕ್ಷಕ್ಕೆ ಮರಳುತ್ತಿದ್ದೇನೆ’ ಎಂದು ಹೇಳಿದರು.

‘ನನ್ನೊಂದಿಗೆ ಕಾಂಗ್ರೆಸ್‌ನ ಹಲವು ಶಾಸಕರು ಸಂಪರ್ಕದಲ್ಲಿ ಇದ್ದಾರೆ. ಸೂಕ್ತ ಸಮಯದಲ್ಲಿ ಅವರೆಲ್ಲ ಬಿಜೆಪಿಗೆ ಸೇರಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿ ಪಕ್ಷ ಸಂಘಟಿಸುವ ಗುರಿ ಹೊಂದಿದ್ದೇನೆ’ ಎಂದರು.

ADVERTISEMENT

‘ಕಾಂಗ್ರೆಸ್‌ ಈಗ ಮುಪ್ಪಾದ ಆಲದ ಮರ. ಅದರ ನಾಯಕ ರಾಹುಲ್‌ ಗಾಂಧಿಗೆ ದೇಶವನ್ನು ಪ್ರಬುದ್ಧವಾಗಿ ಆಳುವ ಶಕ್ತಿ ಇಲ್ಲ. ಈ ದೌರ್ಬಲ್ಯವನ್ನೇ ಬಳಸಿಕೊಂಡು ಇಲ್ಲಿನ ನಾಯಕರು ಆಟ ಆಡುತ್ತಿದ್ದಾರೆ’ ಎಂದು ಟೀಕಿಸಿದರು.

ಡಿಕೆಶಿ ಅಕ್ರಮ ಬಯಲಿಗೆ: ‘ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅಕ್ರಮಗಳ ದಾಖಲೆ ಇದ್ದು, ಅವುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇನೆ’ ಎಂದು ಎಚ್ಚರಿಸಿದರು.
‘ಪಾವಗಡದಲ್ಲಿ ಸ್ಥಾಪನೆಯಾಗುತ್ತಿರುವ ದೇಶದ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀಡಿರುವ ಜಮೀನು ಯಾರ ಹೆಸರಿನಲ್ಲಿದೆ ಎಂಬುದರ ಬಗ್ಗೆ ತನಿಖೆ ನಡೆದರೆ ಅಕ್ರಮ ಗೊತ್ತಾಗುತ್ತದೆ.

ಅಲ್ಲಿನ ಸಾವಿರಾರು ಎಕರೆ ಜಮೀನನ್ನು ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಕಾರ್ಯಕರ್ತರ ಹೆಸರಿನಲ್ಲಿ ನೋಂದಣಿ ಮಾಡಿಸಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಅವರದ್ದೇ ಇಲಾಖೆಯ ಕಲ್ಲಿದ್ದಲು ಹಗರಣದ ಹಲವು ದಾಖಲೆಗಳು ನನ್ನಲ್ಲಿ ಇವೆ’ ಎಂದರು.

‘ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತ ತನಿಖೆ ಸಮಿತಿಗೆ ಡಿ.ಕೆ.ಶಿವಕುಮಾರ್ ಅವರೇ ಅಧ್ಯಕ್ಷರಾಗಿದ್ದಾರೆ. ಇದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ?’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.