ADVERTISEMENT

ಪರಿಶೀಲನಾ ಸಮಿತಿ ರಚನೆ ಭರವಸೆ

ಉದ್ಯೋಗ ಖಾತ್ರಿ ಯೋಜನೆ: ಕೋಟ್ಯಂತರ ರೂಪಾಯಿ ದುರುಪಯೋಗದ ಆರೋಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 8:10 IST
Last Updated 14 ಸೆಪ್ಟೆಂಬರ್ 2013, 8:10 IST

ರಾಮನಗರ:  ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಮೂಲಕ ಅರಣ್ಯ ಇಲಾಖೆಗೆ ಸಂದಾಯವಾಗಿರುವ ಕೋಟ್ಯಂತರ ರೂಪಾಯಿ ದುರುಪಯೋಗ ಆಗಿರುವ ಮಾಹಿತಿ ಬಂದಿದ್ದು, ಅದರ ಸಮಗ್ರ ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಸಿ.ರಾಜಣ್ಣ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಅವರು ಉತ್ತರಿಸಿದರು.

ಈ ಕುರಿತು ಸದಸ್ಯ ಮುದ್ದುರಾಜ್ ಯಾದವ್ ಅವರು ಸಭೆಯ ಗಮನ ಸೆಳೆದಾಗ ಮಾತನಾಡಿದ ಅಧ್ಯಕ್ಷರು, ಗ್ರಾಮ ಪಂಚಾಯತಿ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಇಲಾಖೆಗೆ ಜಿಲ್ಲಾ ಪಂಚಾಯತ್ ಕಡೆಯಿಂದ 7ರಿಂದ -8 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಇದು ದುರುಪಯೋಗವಾಗಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗದ ಡಿ.ಎಫ್.ಓ, ನರೇಗಾ ಒಂಬುಡ್ಸ್ಮನ್‌, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರನ್ನೊಳಗೊಂಡ ಸಮಿತಿಯಿಂದ ತನಿಖೆ ನಡೆಸಿ ಹಣ ದುರುಪಯೋಗದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಕುಡಿಯುವ ನೀರು ಪೂರೈಸಲು ಕೊರೆಸಲಾಗಿರುವ ಕೊಳವೆ ಬಾವಿಗಳಲ್ಲಿ ಹಲವು  ವಿಫಲಗೊಂಡಿವೆ ಹಾಗೂ ಕೆಲವು ದುರಸ್ತಿಗೆ ಒಳಗಾಗಿವೆ. ಇವುಗಳ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸದೇ ಇರುವುದರಿಂದ ವಿದ್ಯುತ್ ಬಿಲ್ ಪಾವತಿಸಲಾಗುತ್ತಿದ್ದು, ಇದರಿಂದಾಗಿ ಗ್ರಾಮ ಪಂಚಾಯಿತಿಗಳಿಗೆ ಭಾರಿ ನಷ್ಟವಾಗುತ್ತಿದೆ. ಕೂಡಲೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಹತ್ತಿರದಲ್ಲಿರುವ ಸಫಲಗೊಂಡು ಚಾಲನೆಯಲ್ಲಿರುವ ಕೊಳವೆ ಬಾವಿಗಳಿಗೆ  ಈ ಸಂರ್ಪಕಗಳನ್ನು ಜೋಡಣೆ ಮಾಡಿ ಪಂಚಾಯಿತಿಗಳಿಗೆ ನಷ್ಟ ತಪ್ಪಿಸುವಂತೆ ಜಿಲ್ಲಾ ಪಂಚಾಯತ್ ಸದಸ್ಯರು ಆಗ್ರಹಿಸಿದರು.

ಒಂದೇ ಸಂಪರ್ಕಕ್ಕೆ ಹಲವು ಬಿಲ್ಲುಗಳನ್ನು ಬೆಸ್ಕಾಂ ನೀಡುತ್ತಿದೆ, ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು. 2012–-13ನೇ ಸಾಲಿನಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಯಾವ ಯಾವ ಲೆಕ್ಕ ಶೀರ್ಷಿಕೆಯಡಿ ಕೊಳವೆ ಬಾವಿ ಕೊರೆಸಲಾಗಿದೆ ? ವಿವಿಧ  ಯೋಜನೆಗಳಡಿ ಬಿಡುಗಡೆಯಾದ ಹಣವೆಷ್ಟು ? ಎಷ್ಟು ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ  ? ಇತ್ಯಾದಿ ಮಾಹಿತಿ ನೀಡುವಂತೆಯೂ ಸದಸ್ಯರು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಸಿಇಒ ಡಾ.ಎಂ.ವಿ. ವೆಂಕಟೇಶ್ ಅವರು ಜಿಲ್ಲೆಯಲ್ಲಿ 2012– -13ನೇ ಸಾಲಿನವರೆಗೆ 1,612 ಕೊಳವೆ ಬಾವಿಗಳನ್ನು ಕೊರೆಸಿದ್ದು, 1,295 ಕೊಳವೆ ಬಾವಿಗಳು ಸಫಲಗೊಂಡಿದ್ದು, 317 ವಿಫಲಗೊಂಡಿವೆ. ಅನುದಾನ ಹಾಗೂ ಇನ್ನು ಉಳಿದ ಮಾಹಿತಿಯನ್ನು ತಾಲ್ಲೂಕು ಪಂಚಾಯತ್ ಇ.ಓ ಗಳಿಂದ ಸಂಗ್ರಹಿಸಿ ಒದಗಿಸುವುದಾಗಿ ತಿಳಿಸಿದರು.

ಸದಸ್ಯ ಧನಂಜಯ್ಯ ಸುವರ್ಣ ಗ್ರಾಮ ಯೋಜನೆ ಹಾಗೂ ಇತರೆ ಯೋಜನೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕೆಲಸ ನಿರ್ವಹಿಸಲು ಅನುಮತಿ ನೀಡಿದಾಗಿಯೂ 5ರಿಂದ -6 ತಿಂಗಳಾದರೂ ಸಹ ಕಾಮಗಾರಿ ಪ್ರಾರಂಭವಾಗಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ.ಇ.ಓ ಅಂತಹ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಕೆಲಸ ಪ್ರಾರಂಭಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ, ಯೋಜನಾಧಿಕಾರಿ ಎಸ್.ಧನುಷ್, ಜಿಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.