ADVERTISEMENT

ಪೋಲಿಯೊ ನಿರ್ಮೂಲನೆಗೆ ಕೈಜೋಡಿಸಿ

ಸಿಲ್ಕ್ ಸಿಟಿ ಸಂಸ್ಥೆ ಸಹಯೋಗದಲ್ಲಿ ಪಲ್ಸ್ ಪೊಲಿಯೋ

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 9:27 IST
Last Updated 18 ಜನವರಿ 2016, 9:27 IST
ರಾಮನಗರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಮಹೇಶ್ ಭಾನುವಾರ ಚಾಲನೆ ನೀಡಿದರು.
ರಾಮನಗರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಮಹೇಶ್ ಭಾನುವಾರ ಚಾಲನೆ ನೀಡಿದರು.   

ರಾಮನಗರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೊಲಿಯೋ ಲಿಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಮಂಜುನಾಥ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು 'ಪೊಲಿಯೋ ನಿರ್ಮೂಲನೆಗೆ ಶ್ರಮಿಸುತ್ತಿರುವ ಸರ್ಕಾರದ ಪ್ರಯತ್ನಕ್ಕೆ ನಾಗರಿಕರು ಸಹಕರಿಸಬೇಕು. 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ತಪ್ಪದೆ ಹಾಕಿಸಿ ಪೊಲಿಯೋ ನಿರ್ಮೂಲನೆಗೆ ಪೋಷಕರು ಸಹಕರಿಸಬೇಕು ಎಂದು ತಿಳಿಸಿದರು.

'ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಪೊಲಿಯೋ ಲಸಿಕೆ ನೀಡುವ ಕಾರ್ಯದಲ್ಲಿ ಶೇ 102 ಸಾಧನೆ ಆಗಿತ್ತು. ರಾಮನಗರದ ಮೂಲಕ ಸಂಚರಿಸುವ ಪ್ರಯಾಣಿಕರು, ಜಿಲ್ಲೆಗೆ ಆಗಮಿಸಿದ್ದ ಇತರ ಜಿಲ್ಲೆಗಳ ಪ್ರಯಾಣಿಕರು ಸೇರಿದಂತೆ ಹಲವು ಮಕ್ಕಳಿಗೆ ಲಸಿಕೆ ನೀಡಲಾಗಿತ್ತು, ಈಗ ಜಿಲ್ಲೆಯಲ್ಲಿ ಇದೆ 21ರಂದು 1 ಲಕ್ಷ 14 ಸಾವಿರ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಆರ್.ಸಿ.ಹೆಚ್ ಅಧಿಕಾರಿ ಡಾ.ಲಕ್ಷ್ಮೀಪತಿ ಮಾತನಾಡಿ ವಿಶ್ವದಾದ್ಯಂತ ಪೊಲಿಯೋ ಬಹುತೇಕ ನಿರ್ಮೂಲನೆಯಾಗಿದೆ, ಆದರೆ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಪೊಲಿಯೋ ಪ್ರಕರಣಗಳು ಪತ್ತೆಯಾಗುತ್ತಿವೆ . ವಿಶ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಪೊಲಿಯೋ ನಿರ್ಮೂಲನೆಯಾಗಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 2244 ಸಿಬ್ಬಂದಿ ಪೊಲಿಯೋ ಲಸಿಕೆ ನೀಡುವ ಕಾರ್ಯಕ್ಕೆ ನಿಯೋಜಿತರಾಗಿದ್ದಾರೆ. 12 ತಂಡ ಗುಡ್ಡ ಗಾಡು, ಅರಣ್ಯ ಪ್ರದೇಶಗಳಿಗೆ ತೆರಳಿ ಅಲ್ಲಿರುವ ಮಕ್ಕಳಿಗೆ ಲಸಿಕೆ ನೀಡುವರು. 20 ತಂಡಗಳು ಜಿಲ್ಲೆಯಲ್ಲಿರುವ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳಲ್ಲಿ ಲಸಿಕೆ ನೀಡುವರು. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಇರುವ ಕ್ಯಾಂಪ್‌ಗಳನ್ನು ಗುರುತಿಸಲಾಗಿದ್ದು, ಇಲಾಖೆಯ ಸಿಬ್ಬಂದಿ ಅಲ್ಲಿಗೂ ತೆರಳಿ ಲಸಿಕೆ ನೀಡುವರು. ಇದೆ 18 ಮತ್ತು 19ರಂದು ಸಿಬ್ಬಂದಿ ಮನೆ ಮನೆಗೆ ತೆರಳಿ ಪೊಲಿಯೋ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ನೀಡುವರು  ಎಂದು ಅವರು ಹೇಳಿದರು.

ರೋಟರಿ ಸಂಸ್ಥೆಯಿಂದ 60 ಲಕ್ಷ ರೂ ದೇಣಿಗೆ: ರೋಟರಿ ಸಂಸ್ಥೆ ಅಧ್ಯಕ್ಷ ಅಲ್ತಾಫ್ ಅಹಮದ್ ಮಾತನಾಡಿ ವಿಶ್ವದಲ್ಲಿ ಪೊಲಿಯೋ ನಿರ್ಮೂಲನೆಗೆ ಸರ್ಕಾರಗಳ ಜೊತೆಗೆ ರೋಟರಿ ಸಂಸ್ಥೆಯೂ ನಿರಂತರ ಸಹಕರಿಸುತ್ತಿದೆ. ರೋಟರಿ ಜಿಲ್ಲೆ 3190ರ ಮೂಲಕ ಪೊಲಿಯೋ ಲಸಿಕೆ ನೀಡುವ ಕಾರ್ಯಕ್ಕೆ ವಾರ್ಷಿಕ 60 ಲಕ್ಷ ರೂ ದೇಣಿಗೆ ನೀಡುತ್ತಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಯಾಜ್ ಅಹಮದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮುನಿರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ.ಶಶಿಕಲಾ, ರೋಟರಿ ಸಿಲ್ಕಸಿಟಿಯ ಅಧ್ಯಕ್ಷ ಬಿ.ಗೋಪಾಲ್, ರೋಟರಿ ಜಿಲ್ಲಾ ಮಾಜಿ ಉಪಪಾಲಕ ಆರ್.ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.