ADVERTISEMENT

ಪ್ರಮುಖ ನಾಯಕರೊಂದಿಗೆ ಅಭ್ಯರ್ಥಿಗಳ ಪ್ರಚಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 7:30 IST
Last Updated 29 ಮಾರ್ಚ್ 2011, 7:30 IST
ಪ್ರಮುಖ ನಾಯಕರೊಂದಿಗೆ ಅಭ್ಯರ್ಥಿಗಳ ಪ್ರಚಾರ
ಪ್ರಮುಖ ನಾಯಕರೊಂದಿಗೆ ಅಭ್ಯರ್ಥಿಗಳ ಪ್ರಚಾರ   

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು, ಸೋಮವಾರ ಮೂರು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಯಕರ ಜತೆಗೂಡಿ ಮತಯಾಚನೆ ನಡೆಸಿದರು.

ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಪರ ಮತಯಾಚಿಸಲು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಂಗ ಪ್ರವೇಶಿಸಿದರು. ಅಕ್ಕೂರು ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಇಗ್ಗಲೂರಿನಿಂದ ಪ್ರಚಾರ ಆರಂಭಿಸಿದರು.

ಇಗ್ಗಲೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆಸಲ್ಲಿಸಿದ ನಂತರ ಬಹಿರಂಗ ಭಾಷಣ ಮಾಡಿದ ಕುಮಾರಸ್ವಾಮಿ, ‘ಈ ಉಪ ಚುನಾವಣೆ ಹಣಬಲ ಮತ್ತು ಜನಬಲದ ನಡುವಿನ ಹೋರಾಟವಾಗಿದೆ. ಇಲ್ಲಿ ಬಿಜೆಪಿಯದ್ದು ಹಣಬಲವಾದರೆ, ಜೆಡಿಎಸ್‌ನದು ಜನಬಲ. ಗೆಲುವು ಯಾರಿಗೆ ದೊರೆಯುತ್ತದೆ ಎಂಬುದನ್ನು ಜನತೆಯೇ ನಿರ್ಧರಿಸುತ್ತಾರೆ’ ಎಂದು ಹೇಳಿದರು.

‘ಕಾಂಗ್ರೆಸ್ ಬೆಂಬಲಿಸುತ್ತದೆ’: ‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರೇ ಜೆಡಿಎಸ್ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರೇ ಹಿಂದೆ ತಗಚಗೆರೆ ಕಾರ್ಯಕ್ರಮದಲ್ಲಿ ಸಿಂ.ಲಿಂ. ನಾಗರಾಜು ಅಂತಹ ಹಿರಿಯ ಕಾರ್ಯಕರ್ತರನ್ನು ಜೆಡಿಎಸ್ ಗುರುತಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಗೌರವ ಕೊಟ್ಟು ಸಿಂ.ಲಿಂ ಅವರನ್ನೇ ಕಣಕ್ಕಿಳಿಸಿದ್ದೇನೆ. ಹಾಗಾಗಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಬೆಂಬಲಿಸುತ್ತದೆ’ ತಿರುಗೇಟು ನೀಡಿದರು.

ರಾಜ್ಯದ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಈ ಉಪ ಚುನಾವಣೆ ನಂತರ ಸರ್ಕಾರ ಪತನ ನಿಶ್ಚಿತ ಎಂದ ಅವರು, ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಕಾರ್ಯಕರ್ತರು ಸಿಂ.ಲಿಂ.ನಾಗರಾಜು ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಕಳೆದ ಚುನಾವಣೆಯಲ್ಲಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವುದಾಗಿ ಸುಳ್ಳು ಭರವಸೆ ನೀಡಿದ್ದರು. ಈಗ ಶಿಂಷಾ ನದಿ ನೀರು ಹರಿಸುವುದಾಗಿ ಮತ್ತೊಮ್ಮೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಕ್ಷೇತ್ರದ ಪ್ರಜ್ಞಾವಂತ ಮತದಾರರ ಇಂತಹ ಆಶ್ವಾಸನೆಗಳಿಗೆ ಕಿವಿಗೊಡಬೇಡಿ ಎಂದರು.

ಮುವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಜೆಡಿಎಸ್ ಪ್ರಚಾರ ನಡೆಸಿತು. ಪಕ್ಷದ ಅಭ್ಯರ್ಥಿ ಸಿಂ.ಲಿಂ.ನಾಗರಾಜು, ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನೇಗೌಡ, ‘ಬಮೂಲ್’ ನಿರ್ದೇಶಕ ಲಿಂಗೇಶ್ ಕುಮಾರ್, ಮುಖಂಡರಾದ ಗರಕಹಳ್ಳಿ ಕೃಷ್ಣೇಗೌಡ, ವಡ್ಡರಳ್ಳಿ ರಾಜಣ್ಣ ಮೊದಲಾದವರು ಪಾಲ್ಗೊಂಡಿದ್ದರು.

ಬಿಜೆಪಿ ಪ್ರಚಾರ: ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ ಅವರು ಜಿಲ್ಲಾ ಮತ್ತು ಸ್ಥಳೀಯ ಮುಖಂಡರ ಜತೆಗೂಡಿ ಕೆಂಗಲ್, ವಂದಾರಗುಪ್ಪೆ, ಕಣ್ವ ಪ್ರದೇಶದ ಸುತ್ತಮುತ್ತ ಪ್ರಚಾರ ನಡೆಸಿದರು. ಮೂರು ಬಾರಿ ಶಾಸಕರಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ಕಾರ ಮೂರು ವರ್ಷದಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುತ್ತಾ ಮತಯಾಚಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚುನಾವಣೆ ನಂತರ ಸರ್ಕಾರ ಪತನ ಆಗುತ್ತದೆ ಎಂದು ಜೆಡಿಎಸ್ ವರಿಷ್ಠರು ಹಲವು ಬಾರಿ ಹೇಳಿದ್ದಾರೆ. ಈಗಲೂ ಅದನ್ನೇ ಹೇಳುತ್ತಿದ್ದಾರೆ. ಆದರೆ ಸರ್ಕಾರ ಸ್ಥಿರವಾಗಿದ್ದು, ಯಾವುದೇ ಅಡೆ ತಡೆ ಇಲ್ಲ’ ಎಂದರು.

‘ಚುನಾವಣೆ ನಂತರ ಸರ್ಕಾರ ಪತನ ಹೊಂದುತ್ತದೆ ಎಂಬುದಾದರೆ ಕುಮಾರಸ್ವಾಮಿ ಅವರೇಕೆ ಸುಡು ಬಿಸಿಲಿನಲ್ಲಿ ಬೆವರು ಸುರಿಸಿಕೊಂಡು ಪ್ರಚಾರ ನಡೆಸಬೇಕಿತ್ತು’ ಎಂದು ಕೆಣಕಿದ ಯೋಗೇಶ್ವರ್ ಅವರು, ಸರ್ಕಾರ ಸ್ಥಿರವಾಗಿದೆ ಎಂಬುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಹಾಗಾಗಿ ಅವರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ರಘುನಂದನ್ ರಾಮಣ್ಣ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಉಪ ಚುನಾವಣೆಯಲ್ಲಿ ಗೆಲ್ಲವ ವಿಶ್ವಾಸ ಇದೆ ಎಂದು ಹೇಳಿದ ಅವರು ಸುತ್ತಮುತ್ತಲ ಗ್ರಾಮಗಳ ಮನೆ ಮನೆಗೆ ತೆರಳಿ ಮತ ನೀಡುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.