ADVERTISEMENT

ಪ್ರಾಬಲ್ಯ ಉಳಿಸಲು ಮುಂದಾದ ಸಚಿವ

ಕುತೂಹಲಕ್ಕೆ ಎಡೆ ಕೊಟ್ಟ ಡಿ.ಕೆ.ಶಿವಕುಮಾರ್‌ ತೀರ್ಮಾನ *ಮಂಜು ಪಕ್ಷದಲ್ಲೇ ಉಳಿಸಲು ತಂತ್ರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 8:50 IST
Last Updated 5 ಜೂನ್ 2017, 8:50 IST
ಸಿ.ಪಿ.ಯೋಗೇಶ್ವರ್‌
ಸಿ.ಪಿ.ಯೋಗೇಶ್ವರ್‌   

ರಾಮನಗರ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿರುವ ಬೆನ್ನಲ್ಲಿಯೆ ಜಿಲ್ಲೆಯಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಸಚಿವ ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ.

ಜೆಡಿಎಸ್‌ ಪಕ್ಷದ ಭಿನ್ನಮತೀಯ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕಾಂಗ್ರೆಸ್ ಸೇರುವ ತವಕದಲ್ಲಿದ್ದಾರೆ. ಈ ನಡುವೆ ಡಿ.ಕೆ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ.ರಾಜೇಶ್‌ಗೆ ಸೋಮವಾರ ಸಂಜೆ ವೇಳೆಗೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿರುವುದು ತೀವ್ರ ಕೂತೂಹಲ ಕೆರಳಿಸಿದೆ.

ಸಿ.ಪಿ.ರಾಜೇಶ್‌ ಅವರಿಂದ ತೆರವಾಗುವ ಸ್ಥಾನವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಅವರಿಗೆ ನೀಡಿ ಅವರನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಡಿಕೆಶಿ ಸಹೋದರರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಶಾಸಕ ಸಿ.ಪಿ.ಯೋಗೇಶ್ವರ್‌ ಸಹೋದರ ಸಿ.ಪಿ. ರಾಜೇಶ್ ಅವರು ರಾಜೀನಾಮೆ ನೀಡಲಿದ್ದಾರೆಯೇ ಎಂಬುದೂ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ADVERTISEMENT

ಒಂದು ವರ್ಷದ ಹಿಂದೆ ಎ.ಮಂಜು ಅವರಿಗೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಸ್ಥಾನ ಕೈ ತಪ್ಪಿತ್ತು. ರಾತ್ರೋರಾತ್ರಿ ದೆಹಲಿಯಲ್ಲಿದ್ದ ಸಿ.ಪಿ. ಯೋಗೇಶ್ವರ್ ಅವರು ತಮ್ಮ ಸಹೋದರನಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಟ್ಟ ಪಡೆಯಲು ನಡೆಸಿದ ರಾಜಕೀಯ ತಂತ್ರದಲ್ಲಿ ಯಶಸ್ವಿಯಾಗಿದ್ದರು ಎಂಬ ಮಾತುಗಳು ಪಕ್ಷದ ಮುಖಂಡರಿಂದ ಕೇಳಿಬಂದಿತ್ತು.

ಆಗ ಎ.ಮಂಜು ಮತ್ತು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಮಾಗಡಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಅವರ ರಾಜಕೀಯ ಬೆಳವಣಿಗೆಗೆ ಕಡಿವಾಣ ಹಾಕಲು ಜೆಡಿಎಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಶಾಸಕ ಯೋಗೇಶ್ವರ್‌ರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಾದಿ ಕೇಳುವಂತೆ ದುಂಬಾಲು ಬಿದ್ದಿದ್ದರು. ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ.

ಬಳಿಕ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಾಲಕೃಷ್ಣ ಮತ ಚಲಾಯಿಸಿ ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾದರು. ನಂತರ ಕಾಂಗ್ರೆಸ್ ಪಕ್ಷ ಸೇರುವುದಾಗಿ ಅವರು ಘೋಷಿಸಿದ್ದರು.

ಈ ಬೆಳವಣಿಗೆ ನಡುವೆ ಬಾಲಕೃಷ್ಣ ಅವರ ವಿರೋಧಿ ಎ. ಮಂಜು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಳ್ಳತೊಡಗಿದರು. ಇದನ್ನು ಗಮನಿಸಿದ ಸಂಸದ ಡಿ.ಕೆ. ಸುರೇಶ್, ಎ.ಮಂಜು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಬಗ್ಗೆ ಶಿವಕುಮಾರ್‌ ಮೇಲೆ ಒತ್ತಡ ತಂದಿದ್ದಾರೆ. ಇದೇ ಸಂದರ್ಭದಲ್ಲಿ ಎ. ಮಂಜು ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದರೆ ತಮ್ಮ ದಾರಿಯೂ ಸುಲಭವಾಗಲಿದೆ ಎಂದು ಅರಿತ ಬಾಲಕೃಷ್ಣ ಅವರು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರ ಮೇಲೆ ಒತ್ತಡ ತಂದು ಸಚಿವರಿಗೆ ಸಿ.ಪಿ.ರಾಜೇಶ್ ಅವರ ರಾಜೀನಾಮೆಗೆ ಆಗ್ರಹಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಡಿ.ಕೆ. ಶಿವಕುಮಾರ್ ಅವರು ಸೋಮವಾರ ಸಂಜೆ ವೇಳೆಗೆ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿ.ಪಿ. ರಾಜೇಶ್‌ಗೆ ಸೂಚಿಸಿದ್ದು, ಅವರ ಮಾತಿಗೆ ಮನ್ನಣೆ ಸಿಗಬಹುದೇ ಎಂದು ಕಾದು ನೋಡಬೇಕಿದೆ.

**

ರಾಜೀನಾಮೆ ಅಂಗೀಕಾರ ಅನುಮಾನ?

ಕಳೆದ ಚುನಾವಣೆಯಿಂದ ಈಚೆಗೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾನೂನನ್ನು ತಿದ್ದುಪಡಿ ಮಾಡಲಾಗಿದೆ. ಈ ಹುದ್ದೆಗೆ ಆಯ್ಕೆಯಾದವರು ಐದು ವರ್ಷಗಳವರೆಗೆ ಅಧಿಕಾರದಲ್ಲಿರುತ್ತಾರೆ ಎಂದು ಜಿಪಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಮ್ಮೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕಾದರೂ 30 ತಿಂಗಳು ಆ ಹುದ್ದೆಯಲ್ಲಿರಬೇಕು. ಇಲ್ಲದಿದ್ದಲ್ಲಿ ಅಧ್ಯಕ್ಷರ ಮೇಲೆ ಯಾವುದಾರರೂ ಗುರುತರ ಆರೋಪ ಅಥವಾ ಅಪರಾಧಗಳು ನಡೆದಲ್ಲಿ ಮಾತ್ರ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬಹುದು.
ಅಧ್ಯಕ್ಷ ನಾಮಕಾವಾಸ್ತಗೆ ರಾಜೀನಾಮೆ ನೀಡಿದರೆ ಅಥವಾ ಅವರ ರಾಜೀನಾಮೆಗೆ ಯಾರಾದರೂ ಒತ್ತಡ ತಂದರೆ ಅದು ಅಂಗೀಕಾರವಾಗುವುದಿಲ್ಲ. ಈ ಬಗ್ಗೆ ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಒಂದೊಮ್ಮೆ 30 ತಿಂಗಳ ಒಳಗೆ ಅಧ್ಯಕ್ಷ ಸ್ವಪ್ರೇರಣೆಯಿಂದ ರಾಜೀನಾಮೆ ನೀಡಬೇಕಾದ್ದಲ್ಲಿ ಅವರು ಸ್ಪಷ್ಟವಾದ ಮತ್ತು ನಿಖರ ಕಾರಣಗಳನ್ನು (ಸದ್ಯಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಗೆಜೆಟೆಡ್‌ ವೈದ್ಯಾಧಿಕಾರಿ ದೃಢೀಕರಿಸಿರಬೇಕು) ನೀಡಬೇಕು. ಇಲ್ಲದಿದ್ದಲ್ಲಿ ಅವರು ನೀಡಿರುವ ರಾಜೀನಾಮೆ ಅಂಗೀಕರಿಸಲು ಸಾಧ್ಯವಾಗುವುದಿಲ್ಲ.

ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ರಾಜೀನಾಮೆಗೆ ಬಹಿರಂಗವಾಗಿಯೇ ಹೇಳಿಕೆ  ನೀಡಿದ್ದಾರೆ. ಆದ್ದರಿಂದ ಅವರ ರಾಜೀನಾಮೆ ಒತ್ತಡಪೂರ್ವಕ ಎಂದು ಪರಿಗಣಿಸಿದಲ್ಲಿ ಯಾವುದೇ ಕಾರಣಕ್ಕೂ ಅದು ಅಂಗೀಕಾರವಾಗುವುದಿಲ್ಲ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.

**

ನನ್ನ ಸಹೋದರ, ಜಿಪಂ ಅಧ್ಯಕ್ಷ ರಾಜೇಶ್‌ ಅವರಿಂದ ರಾಜೀನಾಮೆ ಕೇಳಿರುವುದು ನನಗೆ ತಿಳಿದಿಲ್ಲ. ಆ ಕುರಿತು ತಿಳಿದುಕೊಂಡು ನಾಳೆ ಪ್ರತಿಕ್ರಿಯೆ ನೀಡುವೆ
–ಸಿ.ಪಿ.ಯೋಗೇಶ್ವರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.