ADVERTISEMENT

ಬಮೂಲ್ ಉಪ ವ್ಯವಸ್ಥಾಪಕರ ವಿರುದ್ಧ ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರಿನ ಎಚ್.ವೈ.ಅಶ್ವತ್ಥ್ ಎಂಬುವರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಿರುದ್ಧ ಬಮೂಲ್ ಚನ್ನಪಟ್ಟಣ ಶಿಬಿರದ ಉಪ ವ್ಯವಸ್ಥಾಪಕರಿಗೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಯಾವುದೇ ನೋಟೀಸ್ ನೀಡದೆ ಸಂಘದ ತಮ್ಮ ಸದಸ್ಯತ್ವವನ್ನು ಏಕಾಏಕಿ ರದ್ದುಪಡಿಸಿ ಹಾಲು ಹಾಕಿಸಿಕೊಳ್ಳದೆ ಅನ್ಯಾಯ ಮಾಡಲಾಗುತ್ತಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಅವರು ದೂರಿನಲ್ಲಿ ಕೇಳಿದ್ದಾರೆ. ಸಂಘದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಬಗ್ಗೆ ಮಾತನಾಡಿದ್ದಕ್ಕೆ ಹಾಗೂ ಸಂಘದ ಲೆಕ್ಕಪತ್ರ, ದಾಖಲಾತಿಗಳನ್ನು ನೀಡಲು ಕೇಳಿದ್ದನ್ನೇ ನೆಪವಾಗಿಟ್ಟುಕೊಂಡು ವಿನಾಕಾರಣ ತಮ್ಮ ಮೇಲೆ ಇಲ್ಲಸಲ್ಲದ ಕಾರಣಗಳನ್ನು ಹುಡುಕಿ, ಇತರರನ್ನು ನನ್ನ ವಿರುದ್ಧ ಎತ್ತಿಕಟ್ಟಿ, ಯಾವುದೇ ನೋಟಿಸ್ ನೀಡದೆ ಏಕಾಏಕಿ ಸಂಘದ ನನ್ನ ಸದಸ್ಯತ್ವವನ್ನು ರದ್ದುಮಾಡಿ ಹಾಲನ್ನು ಹಾಕಿಸಿಕೊಳ್ಳದೆ ನನಗೆ ದ್ರೋಹ ಮಾಡಲಾಗುತ್ತಿದೆ ಎಂದು ಅಶ್ವತ್ಥ್ ದೂರಿನಲ್ಲಿ ವಿವರಿಸಿದ್ದಾರೆ.

ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಗೆ ನನ್ನ ಮೇಲೆ ಕೆಲವರು ದೂರು ನೀಡಿದ್ದಾರೆ ಎಂಬ ಕಾರಣವನ್ನಿಟ್ಟುಕೊಂಡು ಈ ರೀತಿ ಮಾಡಲಾಗಿದೆ ಎಂದು ತಿಳಿಸಿರುವ ಅಶ್ವತ್ಥ್, ನಾನು ಈವರೆಗೆ ಸಂಘಕ್ಕೆ ಹಾಕಿರುವ ಹಾಲಿಗೆ ನನಗೆ ಬರಬೇಕಾದ ಹಣವನ್ನು ನ್ಯಾಯಯುತವಾಗಿ ಕೇಳಲು ಹೋದಾಗ ನನ್ನ ಸಹಿ ಹಾಕಿಸಿಕೊಂಡು ನಿನಗೆ ಹಣವನ್ನೇ ಕೊಡಬೇಕಾಗಿಲ್ಲ ಎಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.