ADVERTISEMENT

ಭಾರತೀಯ ಸಂಸ್ಕೃತಿ ಅಧೋಗತಿಗೆ

ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡರ ವಿಷಾದ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 9:03 IST
Last Updated 11 ಮಾರ್ಚ್ 2014, 9:03 IST

ರಾಮನಗರ: ಅತಿಯಾದ ವಿದೇಶಿ ವ್ಯಾಮೋಹದಿಂದಾಗಿ ಭಾರತೀಯ ಸಂಸ್ಕೃತಿಯು ಅಧೋಗತಿಗೆ ಇಳಿಯುತ್ತಿದ್ದು, ಜತೆಗೆ ಗ್ರಾಮೀಣ ಪ್ರದೇಶದ ಸೊಗಡಿನ ಕಲೆಗಳು ವಿನಾಶದತ್ತ ಸಾಗುತ್ತಿವೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ವಿಷಾದಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಎಚ್.ಎಲ್. ನಾಗೇಗೌಡರ ಶತಮಾನೋತ್ಸವದ ಪ್ರಯುಕ್ತ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ‘ಯುವ ಜನರತ್ತ ಜಾನಪದ: ಕಾಲೇಜಿನಿಂದ ಕಾಲೇಜಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾಡಿನ ಸಂಸ್ಕೃತಿಯನ್ನು ವಿದೇಶಿಯರು ಅಪ್ಪಿಕೊಂಡಿರುವಾಗ ದೇಶಿಯರಾದ ನಾವು ನಮ್ಮ ಸಂಸ್ಕೃತಿಯನ್ನು ಕಡೆಗಣಿಸುವುದು ಸರಿಯಲ್ಲ. ಜನಪದ ಪ್ರತಿಯೊಬ್ಬರ ಉಸಿರಾಗಬೇಕು. ಹಳ್ಳಿಗಳ ಜನಪದ ಕಲೆಗಳನ್ನು ಬಳಸಿ, ಉಳಿಸಿ, ಬೆಳೆಸಬೇಕು. ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿ ನೀಡುವ ಕೆಲಸವನ್ನು ಯುವ ಸಮುದಾಯ ಮಾಡಬೇಕಿದೆ’ ಎಂದು ಕಿವಿಮಾತು ಹೇಳಿದರು.

ಭಾರತೀಯ ಜನಪದ ಸಂಸ್ಕೃತಿಯು ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಅಲ್ಲದೆ ಜನಪದ ಸಂಸ್ಕೃತಿ ಸಮಾಜದಲ್ಲಿ ಬದುಕುವ ರೀತಿ, ನೀತಿಯನ್ನು ತಿಳಿಸಿಕೊಡುತ್ತದೆ. ಶಿಷ್ಟ ಸಂಸ್ಕೃತಿಯ ಅನುಕರಣೆಯಿಂದ  ಜನಪದ ಕಲೆಗಳು ನಶಿಸುತ್ತಿವೆ. ಈ ಕುರಿತು ಜನಪದ ಕಲಾವಿದರು, ಯುವ ಸಮುದಾಯ ಜಾಗೃತರಾಗಬೇಕು. ಅಷ್ಟೇ ಅಲ್ಲದೆ ಜನಪದ ಕಲೆಗಳನ್ನು ಉಳಿಸುವತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.

ಜಾನಪದ ಲೋಕದ ಸಂಯೋಜಕ ಡಾ.ಕುರುವ ಬಸವರಾಜ್ ಮಾತನಾಡಿ, ಗ್ರಾಮೀಣ ಜನಪದರ ಉಸಿರಾಗಿರುವ ವಿವಿಧ ಕಲೆಗಳು ನಾಡಿನ ಸಂಸ್ಕೃತಿಯ ಶ್ರೀಮಂತಿಕೆ ಪ್ರತೀಕವಾಗಿವೆ. ಇಂತಹ ಕಲೆಗಳನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕಿದೆ ಎಂದರು.

ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ಸಾವಿತ್ರಮ್ಮ ಮಾತನಾಡಿ, ಜನಪದ ಮತ್ತು ಇತಿಹಾಸಕ್ಕೆ ಸಂಬಂಧವಿದೆ. ಜನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳಿವೆ. ವಿದ್ಯಾರ್ಥಿಗಳು ತಮ್ಮ ಓದಿನ ಜತೆಗೆ ಜನಪದ ಸಾಹಿತ್ಯ, ಕಲೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಜಾನಪದ ಕಲೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಜನಪದ ಕಲಾವಿದ ಮಲ್ಲಯ್ಯ ಗೀತ ಗಾಯನ ಪ್ರಸ್ತುತಪಡಿಸಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೇಮಾನಾಯಕ್, ಕನ್ನಡ ಅಧ್ಯಾಪಕ ಉಮೇಶ್, ರೂಪಾ, ಅರ್ಥಶಾಸ್ತ್ರ ಅಧ್ಯಾಪಕ ರಾಮಕೃಷ್ಣ, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಡಾ.ಎಸ್.ಬಾಲಾಜಿ, ರಂಗ ನಿರ್ದೇಶಕ ಬೈರ್ನಳ್ಳಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.