ADVERTISEMENT

ಮಣ್ಣಿನ ದಿಬ್ಬ ಕುಸಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 9:08 IST
Last Updated 16 ಅಕ್ಟೋಬರ್ 2017, 9:08 IST

ರಾಮನಗರ: ಮಳೆಯಿಂದಾಗಿ ಕಣ್ವ ಹೊಳೆಯು ಮೈದುಂಬಿ ಹರಿಯುವುದನ್ನು ಕಣ್ತುಂಬಿಕೊಳ್ಳುತ್ತಿದ್ದ ವೇಳೆ ಮಣ್ಣಿನ ದಿಬ್ಬ ಕುಸಿದು ಅರಳೀಮರದದೊಡ್ಡಿ ನಿವಾಸಿ ನಂದೀಶ್‌ (39) ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಿಗ್ಗೆ 8ರ ಸುಮಾರಿಗೆ ಅವರು ತಿಮ್ಮಸಂದ್ರ–ಮೆಳೇಹಳ್ಳಿ ಬಳಿಯ ಹೊಳೆ ಪಾತ್ರದ ಪ್ರದೇಶದ ಜಮೀನಿನಲ್ಲಿ ಇತರರರೊಂದಿಗೆ ನಿಂತು ಹಳ್ಳಕ್ಕೆ ನೀರು ತುಂಬುವ ದೃಶ್ಯವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿದ್ದರು.

ಈ ಸಂದರ್ಭದಲ್ಲಿ ಅವರು ನಿಂತಿದ್ದ ನೆಲ ಏಕಾಏಕಿ 25ರಿಂದ 30 ಅಡಿ ಆಳಕ್ಕೆ ಕುಸಿಯಿತು. ಹಳ್ಳಕ್ಕೆ ಬಿದ್ದ ನಂದೀಶ್ ಮೇಲೆ ಮಣ್ಣಿನ ದಿಬ್ಬವೇ ಕುಸಿಯಿತು. ಅವರೊಂದಿಗೆ ಇತರ ಇಬ್ಬರೂ ಹಳ್ಳಕ್ಕೆ ಬಿದ್ದಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದರು. ಆದರೆ ನಂದೀಶ್ ಮೇಲೆ ಮಣ್ಣು ಕುಸಿದಿದ್ದರಿಂದ ಹಾಗೂ ಮರವು ಬಿದ್ದಿದ್ದರಿಂದ ಅವರನ್ನು ಮೇಲೆತ್ತಿಕೊಳ್ಳಲು ಆಗಲಿಲ್ಲ. ಅಷ್ಟರಲ್ಲಿಯೇ ಹೊಳೆಯ ನೀರು ಮುನ್ನುಗ್ಗಿದ್ದು, ಶವವು ನೀರಿನಲ್ಲಿ ಮುಂದಕ್ಕೆ ಕೊಚ್ಚಿ ಹೋಯಿತು.

ಘಟನೆ ನಡೆದ ಸ್ಥಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ವಿಪರೀತವಾಗಿದ್ದು, 50–60 ಅಡಿಗಳ ಆಳಕ್ಕೆ ದೊಡ್ಡ ಹಳ್ಳಗಳನ್ನು ತೋಡಲಾಗಿದೆ. ಈ ಆಳದಲ್ಲಿ ಶವವು ಸಿಲುಕಿದೆ. ರಾಮನಗರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರಾದರೂ ನೀರಿನ ಹರಿವು ಹಾಗೂ ಹಳ್ಳದ ಆಳ ಹೆಚ್ಚಿರುವ ಕಾರಣ ಸಂಜೆಯವರೆಗೂ ಶವವು ಪತ್ತೆಯಾಗಲಿಲ್ಲ.

ADVERTISEMENT

‘ಹಳ್ಳದ ಆಚೆಯ ತುದಿಯನ್ನು ಸಮತಟ್ಟು ಮಾಡಿ ನೀರು ಹೊರ ಹರಿದುಹೋಗಲು ವ್ಯವಸ್ಥೆ ಮಾಡಿದ್ದೇವೆ. ಶವವು ಮಣ್ಣಿನ ಕೆಳಗೆ ಸಿಲುಕಿರುವ ಕಾರಣ ಪತ್ತೆ ಮಾಡುವುದು ಕಷ್ಟವಾಗಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜುನಾಥ್‌ ತಿಳಿಸಿದರು.

ಜನರ ನಿಯಂತ್ರಣಕ್ಕೆ ಸಾಹಸ: ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಕಣ್ವ ಹೊಳೆ ಹರಿವಿನ ಅಕ್ಕಪಕ್ಕದಲ್ಲಿಯೇ ನಿಂತು ವೀಕ್ಷಿಸಿದರು. ನೀರಿನ ಹರಿವಿನ ವೇಗ ಹೆಚ್ಚಿದಂತೆಲ್ಲ ಅಕ್ಕಪಕ್ಕದ ಮಣ್ಣಿನ ಗುಡ್ಡ ಕುಸಿಯತೊಡಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟರು.

ಮೃತ ನಂದೀಶ್‌ ಜೆಡಿಎಸ್‌ ಕಾರ್ಯಕರ್ತರಾಗಿದ್ದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ಅಶೋಕ್‌ ಜೊತೆ ಹೆಚ್ಚು ಗುರುತಿಸಿಕೊಂಡಿದ್ದರು. ಅವರ ಸ್ನೇಹಿತರು ಹಾಗೂ ಪಕ್ಷದ ಕಾರ್ಯಕರ್ತರೂ ಸ್ಥಳಕ್ಕೆ ಭೇಟಿ ನೀಡಿದ್ದರು. ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.