ಚನ್ನಪಟ್ಟಣ: ತಾಲ್ಲೂಕಿನ ವಿರುಪಸಂದ್ರ ಗ್ರಾಮದ ಚಿಕ್ಕತಾಯಮ್ಮ, ಮಾಸ್ತಿಗೌಡ ದಂಪತಿಗಳ ಪುತ್ರರಾಗಿ 1945 ಜೂನ್ 6 ರಂದು ಜನಿಸಿದ ಎಂ. ವರದೇಗೌಡ ಅವರು 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು.
ಎಸ್‌ಎಸ್‌ಎಲ್‌ಸಿ ವರೆಗೆ ವ್ಯಾಸಂಗ ಮಾಡಿದ್ದ ಅವರು ಮೂರು ಬಾರಿ ಚನ್ನಪಟ್ಟಣದ ಶಾಸಕರಾಗಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. ಒಮ್ಮೆ ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.1985ರಲ್ಲಿ ಎದುರಾದ ಮಧ್ಯಂತರ ಚುನಾವಣೆಯಲ್ಲಿ ವರದೇಗೌಡರು ಪುನರಾಯ್ಕೆಯಾದರು.
1989ರಲ್ಲಿ ಕಾಂಗ್ರೆಸ್‌ನ ಸಾದತ್ ಆಲಿಖಾನ್ ವಿರುದ್ಧ ಸೋಲನುಭವಿಸಿದ್ದ ವರದೇಗೌಡ 1994ರಲ್ಲಿ ಅವರನ್ನೇ ಸೋಲಿಸಿ ಪುನಃ ವಿಧಾನಸಭೆ ಪ್ರವೇಶಿಸಿದರು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಅವರು ವರದೇಗೌಡರವನ್ನು ಮುಖ್ಯ ಸಚೇತಕರಾಗಿ ನೇಮಿಸಿದ್ದರು. ದೇವೇಗೌಡರು ಪ್ರಧಾನಿಯಾದಾಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರ ಅವಧಿಯಲ್ಲಿ ರೇಷ್ಮೆ ಸಚಿವರಾಗಿ ಸಂಪುಟ ಸೇರಿದ್ದರು.
1999ರಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಅವರು ಸೋಲು ಅನುಭವಿಸಿದರು. 2004ರಲ್ಲಿ ಜೆಡಿಎಸ್‌ನಿಂದ ಟಿಕೆಟ್ ದೊರೆಯದಾಗ ದೇವೇಗೌಡರ ಜತೆ ವೈಮನಸ್ಸು ಬೆಳೆಯಿತು.
2008ರ ಚುನಾವಣೆಯಲ್ಲಿಯೂ ಟಿಕೆಟ್ ದೊರೆಯದಾಗ ಅವರು ಕಾಂಗ್ರೆಸ್‌ಗೆ ಸೇರ್ಪಗೊಂಡು, ಅಂದಿನ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಮತಪ್ರಚಾರ ಮಾಡಿದ್ದರು. ಯೋಗೇಶ್ವರ್ ರಾಜೀನಾಮೆಯಿಂದಾಗಿ ಪುನಃ 2009ರಲ್ಲಿ ಬಂದ ಉಪಚುನಾವಣೆ ನಂತರ ಜೆಡಿಎಸ್ ಸೇರಿ ರಾಜ್ಯ ಉಪಾಧ್ಯಕ್ಷರಾದರು.
ಆದರೂ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು.ಮತ್ತೆ 2011ರಲ್ಲಿ ಎಂ.ಸಿ ಅಶ್ವತ್ಥ್ ರಾಜೀನಾಮೆಯಿಂದ ಎದುರಾದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಪರ ಮತಪ್ರಚಾರ ನಡೆಸಿದ್ದರು. ಆನಂತರ ವರದೇಗೌಡ ನೇಪಥ್ಯಕ್ಕೆ ಸರಿದಿದ್ದರು.
`ದೇವೇಗೌಡರ ಮಾನಸ ಪುತ್ರ~:ಎಲ್ಲಾ ಕಾಲದಲ್ಲಿಯೂ ದೇವೇಗೌಡರನ್ನೇ ಬೆಂಬಲಿಸಿದ್ದ ವರದೇಗೌಡ ಅವರು ದೇವೇಗೌಡರ `ಮಾನಸಪುತ್ರ ಎಂದೇ ಪ್ರಸಿದ್ಧರಾಗಿದ್ದವರು. ದೇವೇಗೌಡರನ್ನು ಅವರು `ಅಪ್ಪಾಜಿ ಎಂತಲೇ ಕರೆಯುತ್ತಿದರು.
2001ರಲ್ಲಿ ತಾಲ್ಲೂಕಿನಲ್ಲಿ ನಡೆದ ವಿಠಲೇನಹಳ್ಳಿ ನೀರಾ ಚಳುವಳಿ ಸಂದರ್ಭದಲ್ಲಿ ಗೋಲಿಬಾರ್ ಘಟನೆ ಖಂಡಿಸಿ ದೇವೇಗೌಡರು ನಡೆಸಿದ ವಿಠಲೇನಹಳ್ಳಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.