ADVERTISEMENT

‘ಮಾತೃ ಪೂಜೆ ಕುರುಹು ಕರಗ ಮಹೋತ್ಸವ’

ಕರಗ ಮಹೋತ್ಸವಕ್ಕೆ ಚಾಲನೆ ನೀಡಿದ ಅಕ್ಕೈ ಪದ್ಮಶಾಲಿ

​ಪ್ರಜಾವಾಣಿ ವಾರ್ತೆ
Published 19 ಮೇ 2018, 8:51 IST
Last Updated 19 ಮೇ 2018, 8:51 IST

ಮಾಗಡಿ: ಗ್ರಾಮದೇವತೆಗಳು ಪರಾಶಕ್ತಿಯ ವಂಶಗಳಾಗಿ ದೇವಲೋಕದಲ್ಲಿ ಉನ್ನತ ಗೌರವ ಪಡೆದಿದ್ದವು. ಆದರೆ, ಅಹಂಕಾರ, ಜಂಭದಿಂದ ಅವುಗಳನ್ನು ಗಡಿಪಾರು ಮಾಡಲಾಗಿದೆ ಎಂದು ಡಾ.ಅಕ್ಕೈ ಪದ್ಮಶಾಲಿ ತಿಳಿಸಿದರು.

ಕೆಂಪೇಗೌಡ ಗೆಳೆಯರ ಬಳಗ ಹಾಗೂ ಕೋಟೆ ಮಾರಮ್ಮ ಕರಗ ಮಹೋತ್ಸವ ಕಾರ್ಯಕಾರಿ ಸಮಿತಿ ವತಿಯಿಂದ ಶುಕ್ರವಾರ ಸಂಜೆ ನಡೆದ ಮೂರನೇ ವರ್ಷದ ‌ಕರಗ ಮಹೋತ್ಸವದ ಅಂಗವಾಗಿ ಧ್ವಜ ಕಂಬ ನೆಟ್ಟು ಹೂವಿನ ಕರಗ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆಧುನಿಕ ಹಿಂದೂ ಧರ್ಮದಲ್ಲಿ ದ್ರಾವಿಡ ದೇವತೆಗಳು’ ಎಂಬ ಕೃತಿಯು ಗ್ರಾಮದೇವತೆಗಳ ಬಗ್ಗೆ ಗಮನಾರ್ಹ ದಾಖಲೆಗಳನ್ನು ನೀಡಿದೆ. ಮೌರ್ಯ, ಗುಪ್ತರ ಕಾಲದಲ್ಲಿಯೂ ಮಾತೃದೇವತೆಯ ಸ್ವರೂಪ, ಜನಪದ ದೇವತೆಗಳ ಆರಾಧನಾ ಮಹೋತ್ಸವ ನಡೆದಿರುವ ಬಗ್ಗೆ ದಾಖಲೆಗಳಿವೆ’ ಎಂದರು.

ADVERTISEMENT

ದಕ್ಷಿಣ ಭಾರತದ ಜನಪದ ದೇವತೆಗಳ ವಂಶಾವಳಿಯಲ್ಲಿ ಕೋಟೆ ಮಾರಮ್ಮದೇವಿಯ ಕಥನ ಕಾವ್ಯ ಇದೆ. ಗ್ರಾಮ ದೇವತೆಗಳು ಎಂದರೆ ಸ್ತ್ರೀ ಮತ್ತು ಪುರುಷ ದೇವತೆಗಳೆಂದು ಅಧ್ಯಯನ ಸಾಗಿದೆ. ಗ್ರಾಮದೇವತೆಗಳ ವಿಗ್ರಹ, ಸವಲತ್ತುಗಳು, ಪೂಜೆ, ಬಸವ, ಕೊಂಡ, ವಾಹನ, ವಾದ್ಯ, ಲಾಂಛನ, ಒಕ್ಕಲು ಮನೆತನಗಳ ಬಗ್ಗೆ ಗ್ರಾಮದೇವತೆಗಳು ಕೃತಿಯಲ್ಲಿ ಡಾ.ಸಿದ್ದಲಿಂಗಯ್ಯ ಅನನ್ಯ ದಾಖಲೆಗಳನ್ನು ಮಾಡಿದ್ದಾರೆ ಎಂದು ವಿವರಣೆ ನೀಡಿದರು.

ಮಾತೃದೇವತಾ ಪಂಥದ ಜನಪದ ರೂಪಗಳೇ ಗ್ರಾಮ ದೇವತೆಗಳು. ಭಯ, ಭಕ್ತಿ, ಭೀತಿಯಿಂದ ಹುತ್ತ, ವೃಕ್ಷ, ಶಿಲೆಗಳನ್ನು ಆರಾಧಿಸುತ್ತಿದ್ದ ಗ್ರಾಮೀಣರು ಒಂದು ಕಾಲ ಘಟ್ಟದಲ್ಲಿ ಅವುಗಳಲ್ಲಿ ಗ್ರಾಮ ದೇವತೆಗಳನ್ನು ಕಂಡುಕೊಂಡರು. ಜನಪದರು ತಮ್ಮ ಜೀವನದ ಅನುಭವದಿಂದಲೇ ಹುಟ್ಟಿದ್ದ ಪುರಾಣ ಕಥೆಗಳನ್ನು ಅವುಗಳಿಗೆ ಜೋಡಿಸಿದರು. ಭೂಮಿ ಪೂಜೆ ಮತ್ತು ಮಾತೃ ಪೂಜೆಯ ಕುರುಹುಗಳೇ ಕರಗ ಮಹೋತ್ಸವದ ಮಹತ್ವವಾಗಿದೆ ಎಂದರು.

ಸಮಿತಿ ಅಧ್ಯಕ್ಷ ಎಂ.ಆರ್. ಕಿರಣ್ ಕುಮಾರ್, ಕಾರ್ಯದರ್ಶಿ ಚಿಕ್ಕಣ್ಣ, ಖಜಾಂಚಿ ಎಲ್.ಜಿ. ಹೇಮಂತ್ ಕುಮಾರ್, ಕರಗ ಪೂಜಾರಿ ವಾಸುದೇವ್.ಇ, ಸರಸ್ವತಿ ವೀರೇಶ್, ಕೆ. ತಂಗಮ್ಮರಂಗನಾಥ್, ಹೊಸಪೇಟೆ ರಸ್ತೆ ಹೇಮಂತ್, ಸುನಿಲ್, ತ್ಯಾಗರಾಜು, ನಟೇಶ್, ಸ್ವಾಮಿ, ಗೌತಮ ಕರಗ ಮಹೋತ್ಸವದ ಬಗ್ಗೆ ಮಾತನಾಡಿದರು.

ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಪಿ. ರಂಗನಾಥ್ ದಂಪತಿಯನ್ನು ಡಾ. ಅಕ್ಕೈಪದ್ಮಶಾಲಿ ಸನ್ಮಾನಿಸಿದರು. ವಿಶೇಷವಾಗಿ ಅಡಿಕೆ ಮರವೊಂದಕ್ಕೆ ಪೂಜೆ ಸಲ್ಲಿಸಿ ಮಂಗಳವಾದ್ಯ ಸಹಿತ ಮೆರವಣಿಗೆಯಲ್ಲಿ ತಂದು ಭೂಮಿ ಪೂಜೆ ನೆರವೇರಿಸಿ ಧರ್ಮಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.