ADVERTISEMENT

ಮಾ.10ಕ್ಕೆ ತಿಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ರಾಮನಗರ: ತಿಗಳ ಜನಾಂಗಕ್ಕೆ ಸೂಕ್ತ ರಾಜಕೀಯ, ಶೈಕ್ಷಣಿಕ ಸ್ಥಾನಮಾನ ಕಲ್ಪಿಸಲು ಮತ್ತು ಇನ್ನಿತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ತಿಗಳರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಗಂಗಯ್ಯ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ತಿಗಳ ಜನಾಂಗದ ಜನಸಂಖ್ಯೆ 25ಲಕ್ಷ ಇದೆ. ಅಷ್ಟೇನೂ ಆರ್ಥಿಕವಾಗಿ ಸಬಲವಾಗಿಲ್ಲದ ಜನಾಂಗಕ್ಕೆ ಸರ್ಕಾರ ಆರ್ಥಿಕ ಸವಲತ್ತು ನೀಡುವ ಮೂಲಕ ಉತ್ತಮ ಸ್ಥಾನಮಾನ ಕಲ್ಪಿಸಬೇಕಾಗಿದೆ. ಶಾಸಕ ನೆ.ಲ.ನರೇಂದ್ರಬಾಬು ಸೇರಿದಂತೆ ಅನೇಕರು ರಾಜಕಾರಣದಲ್ಲಿ ತಿಗಳ ಸಮುದಾಯವನ್ನು ಪ್ರತಿನಿಧಿಸುತ್ತಿದ್ದರೂ ಜನಾಂಗ ಇನ್ನೂ ಬಲಾಢ್ಯವಾಗಿಲ್ಲ. ಆದ್ದರಿಂದ  ಜನಾಂಗದ  ಸಂಘಟನೆಯನ್ನು ಬಲಗೊಳಿಸಲು ಮಾರ್ಚ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ.
 
ಮುಖ್ಯಮಂತ್ರಿ ಸದಾನಂದ ಗೌಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತಿಗಳ ಜನಾಂಗವು ಹೆಚ್ಚಾಗಿ ಹಣ್ಣು, ಹೂವು, ತರಕಾರಿ ಬೆಳೆಯ ಕೃಷಿಯನ್ನೇ ನಂಬಿಕೊಂಡಿದೆ. ಅಂತೆಯೇ ತಿಗಳ ಜನಾಂಗದ ಅಭಿವೃದ್ಧಿ ಮಂಡಳಿ ಇಂದು ಅವಶ್ಯವಾಗಿದೆ. ಈ ದಿಸೆಯಲ್ಲಿ ಮಂಡಳಿಯನ್ನು ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಜನಾಂಗದ ಶ್ರೇಯೋಭಿವೃದ್ಧಿಗೆ ಸರ್ಕಾರ ಹತ್ತು ಕೋಟಿ ರೂಪಾಯಿಗಳ ಮೀಸಲು ನಿಧಿ ಸ್ಥಾಪಿಸುವಂತೆ ಮನವಿ ಮಾಡಲಾಗುವುದು ಎಂದರು.

ರಾಜ್ಯ ತಿಗಳ ಸಂಘದ ಕೇಂದ್ರ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಜನಾಂಗದ ಜನಪ್ರತಿನಿಧಿಗಳಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪೂರ್ವಭಾವಿ ಸಭೆ: ಸಮಾವೇಶದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಫೆ.11, ನೆಲಮಂಗಲದಲ್ಲಿ ಫೆ.12 ಮತ್ತು ಕೋಲಾರದಲ್ಲಿ ಫೆ.19ರಂದು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ  ಎಂದು ಅವರು ತಿಳಿಸಿದರು.

ಸಂಘದ ರಾಮನಗರ ಜಿಲ್ಲಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಮುನಿಯಪ್ಪ, ಖಜಾಂಚಿ ಶಿವನಂಜಪ್ಪ, ಗೌರವಾಧ್ಯಕ್ಷ ಕುಮಾರ್, ರಾಮನಗರ ತಾಲ್ಲೂಕು ಅಧ್ಯಕ್ಷ ಕೆ.ಗುರುವೇಗೌಡ, ಜಿ.ಪಂ.ಸದಸ್ಯ ಎಚ್. ಸಿ.ರಾಜು, ಕನಕಪುರ ತಾಲ್ಲೂಕು ಅಧ್ಯಕ್ಷ ತಿಮ್ಮರಾಯಿ ಗೌಡ, ನಿರ್ದೇಶಕ ಸಿದ್ದರಾಜು, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಗುರುರಾಜ್, ಜಿ.ಪಂ. ಮಾಜಿ ಸದಸ್ಯ ಬೈರೇಗೌಡ, ಕೃಷ್ಣಪ್ಪ, ಮಾಗಡಿ ಮಾಜಿ ತಾ.ಪಂ.ಸದಸ್ಯರಾದ ಮಹದೇವಯ್ಯ, ಅಶ್ವತ್ಥ್, ಜಯರಾಮಯ್ಯ, ವಿಶ್ವನಾಥ್ ಮತ್ತಿತರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.