ADVERTISEMENT

ರಾಜ್‌ಕುಮಾರ್ ರಸ್ತೆ ವಿಸ್ತರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 5:24 IST
Last Updated 2 ಡಿಸೆಂಬರ್ 2017, 5:24 IST

ಮಾಗಡಿ: ಪಟ್ಟಣದ ಪ್ರಮುಖ ರಸ್ತೆಗಳ ವಿಸ್ತರಣೆ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯ ಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

‘ಪಟ್ಟಣದ ಪ್ರಮುಖ ರಸ್ತೆಯಾ ಗಿರುವ ಡಾ. ರಾಜ್‌ಕುಮಾರ್ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಜಾಗವನ್ನು ಸುತ್ತಲಿನ ಸುತ್ತಲಿನ ಬೀದಿಬದಿಯ ವ್ಯಾಪಾರಿಗಳು
ಒತ್ತುವರಿ ಮಾಡಿಕೊಂಡಿದ್ದು, ರಸ್ತೆಯಲ್ಲಿಯೇ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಅಕ್ಟೋಬರ್‌ 27ರಂದು ಪುರಸಭೆಯ ಗಮನಕ್ಕೆ ತಂದಿದ್ದರೂ ಇನ್ನೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಪ್ರತಿಭಟನಾಕಾರರು ಅಸಮಾ ಧಾನ ವ್ಯಕ್ತಪಡಿಸಿದರು.

ರಾಜ್‌ಕುಮಾರ್ ರಸ್ತೆಯನ್ನು ವಿಸ್ತರಣೆ ಮಾಡಲು ಈ ಹಿಂದೆಯೇ ನಿರ್ಧಾರ ಮಾಡಲಾಗಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಹಿತಾಸ ಕ್ತಿಗಾಗಿ ಜನರ ಹಿತ ಬಲಿ ಕೊಡ ಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವು ರಸ್ತೆ ವಿಸ್ತರಣೆ ಕಾರ್ಯವನ್ನು ಕೈಗೆತ್ತಿ ಕೊಳ್ಳಬೇಕು. ಇನ್ನು ಕೆಲವು ದಿನಗಳ ಒಳಗೆ ಈ ನಿರ್ಧಾರ ಪ್ರಕಟಿಸದೇ ಇದ್ದರೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಪಟ್ಟಣದ ಮತ್ತೊಂದು ಪ್ರಮುಖ ರಸ್ತೆಯಾಗಿರುವ ಆರ್‌.ಆರ್‌. ರಸ್ತೆಯ ಇಕ್ಕೆಲಗಳಲ್ಲಿಯೂ ಎಲ್ಲೆಂದರೆ ಅಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಫುಟ್‌ಪಾತ್‌ ವ್ಯಾಪಾರಿಗಳು ರಸ್ತೆ ಅತಿಕ್ರಮಿಸಿದ್ದಾರೆ. ಅವರಿಗೆ ಪರ್ಯಾ ಯ ವ್ಯವಸ್ಥೆ ಮಾಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ರಸ್ತೆಯಲ್ಲಿಯೇ ವಾಹನ ನಿಲ್ಲಿಸು ವವರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಪುರಸಭೆ ಅಧಿಕಾರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆಯ ರಾಜ್ಯ ವಕ್ತಾರ ಪ್ರಕಾಶ್‌ ರೈ, ಗೌರವ ಸಲಹೆಗಾರ ಕುಮಾರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಡಿ,ಜಿ. ಕುಮಾರ್‌, ಕಾರ್ಯಾಧ್ಯಕ್ಷ ಕೆ. ರವಿ, ಉಪಾಧ್ಯಕ್ಷ ಎಸ್‌.ಕೆ. ಆನಂದಕುಮಾರ್, ಮಾಗಡಿ ಘಟಕದ ಅಧ್ಯಕ್ಷ ವೈ.ಎಸ್. ಚಂದ್ರಶೇಖರ, ಮುಖಂಡರಾದ ಪುಟ್ಟರಾಜು, ತೋಟದಮನೆ ಗಿರೀಶ್, ಧನಂಜಯ, ಪವನ್‌ಕುಮಾರ್, ಶಿವರಾಜು, ರಾಘವೇಂದ್ರ, ಗಂಗಾಧರ್, ರೇಣು, ಫೈರೋಜ್‌ ಖಾನ್, ಮುದ್ದಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.