ADVERTISEMENT

ರಾಮನಗರ: ವಾರ್ಡ್ ನಂ.2ಕ್ಕೆ ಇಂದು ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ರಾಮನಗರ: ನಗರಸಭೆ ವಾರ್ಡ್ ನಂ 2ರ ಉಪ ಚುನಾವಣೆಗೆ ಭಾನುವಾರ ಬೆಳಿಗ್ಗೆ 7ರಿಂದ  ಸಂಜೆ 5ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೆಡಿಎಸ್ ಅಭ್ಯರ್ಥಿ ರೈಡ್ ನಾಗರಾಜ್, ಕಾಂಗ್ರೆಸ್‌ನ ವೆಂಕಟಾಚಲಯ್ಯ ಹಾಗೂ ಬಿಜೆಪಿಯ ಎಲ್.ಚಂದ್ರು ಅವರ ಹಣೆಬರಹ ನಿರ್ಧಾರವಾಗಲಿದೆ.

ವಾರ್ಡ್‌ನ ನಾಲ್ಕು ಮತಗಟ್ಟೆಗಳಲ್ಲಿ ಒಟ್ಟು 3332 ಮತದಾರರು ಇದ್ದು, ತಮ್ಮ ಹಕ್ಕನ್ನು ಚಲಾಯಿಸಲು ಸಿದ್ಧರಾಗಿದ್ದಾರೆ. ಈ ವಾರ್ಡ್‌ನ ಎಲ್ಲ 4 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಅಗತ್ಯ ಪೋಲಿಸ್ ಬಂದೋಬಸ್ತ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಡಾ.ರವಿ ಎಂ. ತಿರ್ಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಕಾರ್ಯಕ್ಕಾಗಿ 20 ಜನ ಮತಗಟ್ಟೆ ಸಿಬ್ಬಂದಿಗಳನ್ನು, ಪೊಲೀಸ್ ಇಲಾಖೆಯಿಂದ ಇಬ್ಬರು ಪಿ.ಎಸ್.ಐ. ಸೇರಿದಂತೆ ಒಟ್ಟು 20 ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಉಪ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದು, ಮತಗಟ್ಟೆ ಸಿಬ್ಬಂದಿ ಎಲ್ಲಾ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗಳನ್ನು ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದೇ 26ರ ಭಾನುವಾರ (ಮತದಾನದ ದಿನಾಂಕ) ದಿಂದ 29ರ ಬುಧವಾರದ (ಮತ ಎಣಿಕೆ ದಿನಾಂಕ) ವರೆಗೆ ರಾಮನಗರ ನಗರಸಭೆ ವ್ಯಾಪ್ತಿಗೆ ಬರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗುರುತಿನ ಚೀಟಿ:  ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿಯನ್ನು (ಎಪಿಕ್) ತೋರಿಸಿ ಮತ ಚಲಾಯಿಸುವುದು ಕಡ್ಡಾಯವಾಗಿರುತ್ತದೆ.

`ಎಪಿಕ್~ ಅಲ್ಲದೇ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್‌ಕಾರ್ಡ್, ಭಾವಚಿತ್ರವಿರುವ ಪಡಿತರ ಚೀಟಿ, ನರೇಗ ಕಾರ್ಡ್, ಯಶಸ್ವಿನಿ ಕಾರ್ಡ್ ಇತ್ಯಾದಿಗಳು ಸೇರಿದಂತೆ ಒಟ್ಟು 21 ಇತರೆ ಗುರುತಿನ ದಾಖಲೆಗಳನ್ನು ತೋರಿಸಿಯೂ ಕೂಡ ಮತದಾರರು ತಮ್ಮ ಮತವನ್ನು ಚಲಾಯಿಸಬಹುದಾಗಿರುತ್ತದೆ ಎಂದು  ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.