ADVERTISEMENT

ರೇಷ್ಮೆಗೆ ವೈಜ್ಞಾನಿಕ ಬೆಲೆ ರೂಪಿಸಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 4:50 IST
Last Updated 15 ಅಕ್ಟೋಬರ್ 2012, 4:50 IST

ಚನ್ನಪಟ್ಟಣ: ಮಾರುಕಟ್ಟೆಯಲ್ಲಿ ರೇಷ್ಮೆಗೆ ವೈಜ್ಞಾನಿಕ ಬೆಲೆ ಇಲ್ಲದೆ ರೈತ ಕಣ್ಣಿರು ಸುರಿಸುವಂತಾಗಿದೆ. ಸರ್ಕಾರಗಳು ರೈತರ ಸಹಾಯಕ್ಕೆ ಬರುತ್ತಿಲ್ಲ ಎಂದು ರಾಜ್ಯ ರೈತಸಂಘದ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ ವಿಷಾದಿಸಿದರು.

ಅವರು ತಾಲ್ಲೂಕಿನ ಬೇವಿನಮರದ ದೊಡ್ಡಿಯಲ್ಲಿ ಶುಕ್ರವಾರ ರೇಷ್ಮೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ರೇಷ್ಮೆಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳ ಅವೈಜ್ಞಾನಿಕ ರೇಷ್ಮೆ ನೀತಿಯಿಂದಾಗಿ ರೈತರು ರೇಷ್ಮೆ ಬೆಳೆಯುವುದನ್ನೇ ಕಡಿಮೆ ಮಾಡುತ್ತಿದ್ದಾರೆ. ಕೃಷಿ ನೀತಿಯನ್ನು ಸರಿಯಾಗಿ ರೂಪಿಸುತ್ತಿಲ್ಲ. ರೈತರ ಯಾವೊಂದು ಬೆಳೆಗೂ ನಿಗದಿತ ಬೆಲೆ ಇಲ್ಲದಂತಾಗಿದೆ. ಚೀನಾ ರೇಷ್ಮೆಯನ್ನು ಆಮದು ಮಾಡಿಕೊಂಡು ನಮ್ಮ ದೇಶದ ರೈತರ ಹೊಟ್ಟೆಯಮೇಲೆ ಹೊಡೆಯುತ್ತಿದೆ. ಇನ್ನು ಮುಂದಾದರೂ ರೈತಪರ ನೀತಿಗಳು ರೂಪುಗೊಳ್ಳಲಿ ಎಂದು ಪುಟ್ಟಸ್ವಾಮಿ ಒತ್ತಾಯಿಸಿದರು. 

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಪಿ.ಟಿ.ವಸಂತ್ ಮಾತನಾಡಿ, ರೇಷ್ಮೆ ಬೆಳೆಯಲು ಇಲಾಖೆ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಒಂದು ಎಕರೆಯಲ್ಲಿ ಬೆಳೆಯುವ ಹಿಪ್ಪುನೇರಳೆಗೆ 4125 ರೂ. ಸಹಾಯ ಧನ, ಹುಳು ಸಾಕಾಣಿಕೆ ಮನೆಗಳಿಗೆ 75 ಸಾವಿರ ರೂ. ಸಬ್ಸಿಡಿ, ಹುಳು ಸಾಕಾಣಿಕೆ ಉಪಕರಣಗಳಿಗೆ 30 ಸಾವಿರದವರೆಗೂ ಸಬ್ಸಿಡಿ ನೀಡಲಾಗುತ್ತಿದೆ. ಹನಿ ನೀರಾವರಿ ಪದ್ಧತಿಯನ್ನು ಅನುಸರಿಸುವ ರೈತರಿಗೆ ಇಲಾಖೆ ವತಿಯಿಂದ 15 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ದಶವಾರ ಗ್ರಾ.ಪಂ. ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಮರೀಗೌಡ, ತಿಮ್ಮಶೆಟ್ಟಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಮಿತ್, ರೇಷ್ಮೆ ವಿಸ್ತರಣಾಧಿಕಾರಿ ಕೆ.ವಿ.ಯಾಲಕ್ಕಪ್ಪ, ರೈತ ಮುಖಂಡ ಹೊಂಬಾಳೆಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.