ADVERTISEMENT

ಶ್ರೀರಂಗರ ಸಾಹಿತ್ಯ ಇಂದಿಗೂ ಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 4:50 IST
Last Updated 27 ಮಾರ್ಚ್ 2018, 4:50 IST
ಉಪನ್ಯಾಸ ಮಾಲಿಕೆಯಲ್ಲಿ ಸಾಹಿತಿ ಡಾ.ನಟರಾಜ ತಲಘಟ್ಟಪುರ ಮಾತನಾಡಿದರು
ಉಪನ್ಯಾಸ ಮಾಲಿಕೆಯಲ್ಲಿ ಸಾಹಿತಿ ಡಾ.ನಟರಾಜ ತಲಘಟ್ಟಪುರ ಮಾತನಾಡಿದರು   

ಮಾಗಡಿ: ಶ್ರೀರಂಗರು ಕನ್ನಡ ಸಾಹಿತ್ಯದ ಮೇರು ಪರ್ವತ. ಅವರ ಸಾಹಿತ್ಯ ವೈಚಾರಿಕತೆಯ ಅಂಶಗಳಿಂದ ಕೂಡಿದೆ ಎಂದು ಸಾಹಿತಿ ಡಾ. ನಟರಾಜ ತಲಘಟ್ಟಪುರ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾಷಾ ವೇದಿಕೆ ಮತ್ತು ಕನ್ನಡ ವಿಭಾಗದಿಂದ ಸೋಮವಾರ ನಡೆದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ‘ಶ್ರೀರಂಗರ ಶೋಕಚಕ್ರ ನಾಟಕದ ವಸ್ತು ಮತ್ತು ಸಮಕಾಲೀನತೆ’ ಕುರಿತು ಅವರು ಮಾತನಾಡಿದರು.

ತಲೆ ತುಂಬ ವಿಚಾರ, ಹೊಟ್ಟೆ ತುಂಬ ನಗೆ ಅವರ ಒಟ್ಟಾರೆ ಸಾಹಿತ್ಯ ತಿರುಳು. ‘ಹರಿಜನ್ವಾರ’ ಅಂದಿನ ಕಾಲದಲ್ಲಿ ಆಸ್ಫೋಟಗೊಂಡ ನಾಟಕ. ಶ್ರೀರಂಗರ ನಾಟಕದ ಶೀರ್ಷಿಕೆಗಳೇ ನಾಟಕದ ಜೀವಾಳ. ‘ಗಾಂಧಿ ಚಳವಳಿಯಲ್ಲಿ ಭಾಗವಹಿಸಿ ಜೈಲಿಗೆ ಹೋಗುವುದಕ್ಕಿಂತ ನಾಟಕ ಬರೆದು ತನ್ನ ವಿಚಾರಳಿಂದ ಸಮಾಜದ ಒಳಿತಿಗೆ ಸಹಕಾರ ನೀಡುವುದು ಹೆಚ್ಚು ಎಂಬುದು ಶ್ರೀರಂಗರ ಜೀವಿತದ ಆಶಯವಾಗಿತ್ತು’ ಎಂದರು.

ADVERTISEMENT

ಗಾಂಧೀಜಿ ಅವರ ಹತ್ಯೆಯಿಂದ ಶ್ರೀರಂಗರಿಗೆ ಆದ ತಳಮಳ, ಕಳವಳದಿಂದ ಹೊರಹೊಮ್ಮಿದ ನಾಟಕವೇ ಶೋಕಚಕ್ರ. ಈ ನಾಟಕದಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಒಂದು ಜಯರಾಯ ಮತ್ತೊಂದು ಹನುಮಂತಪ್ಪ. ಗಾಂಧಿ ತತ್ವದ ಬೆನ್ನುಹತ್ತಿದ ಜಯರಾಯರಿಗೆ ಶೋಕಚಕ್ರ. ಗಾಂಧಿ ಟೊಪ್ಪಿಗೆಯ ಬೆನ್ನುಹತ್ತಿದ ಹನುಂತಪ್ಪನಿಗೆ ಅಶೋಕ ಚಕ್ರ. ಇವೆರಡು ಪಾತ್ರಗಳ ಮುಖಾಂತರವಾಗಿ ನ್ಯಾಯ ಮತ್ತು ಅನ್ಯಾಯಗಳು ಸಮಾಜದಲ್ಲಿ ತಾಂಡವವಾಡುತ್ತಿರುವ ಬಗ್ಗೆ ನಾಟಕದಲ್ಲಿ ವಿವರಿಸುತ್ತಾರೆ. ಕೊನೆಗೂ ಸತ್ಯಕ್ಕೆ ಜಯವಿದೆ ಎಂಬುದು ಶೋಕಚಕ್ರ ನಾಟಕದ ಸಂದೇಶ ಎಂದು ವಿವರಿಸಿದರು.

ಪ್ರೊ. ತಿಮ್ಮಹನುಮಯ್ಯ ಅಧ್ಯಕ್ಷತೆ ವಹಿಸಿ, ಶ್ರೀರಂಗರ ಉದರ ವೈರಾಗ್ಯ, ಅಶ್ವಮೇಧ, ಕತ್ತಲೆ–ಬೆಳಕು, ಅಧಿಕ ಮಾಸ, ದರಿದ್ರ ನಾರಾಯಣ, ಧರ್ಮವಿಜಯ, ಸಂಧ್ಯಾಕಾಲ ಕೃತಿಗಳು ಸಮಾಜದ ಸಮಕಾಲೀನ ಪರಿಸ್ಥಿತಿಯನ್ನು ಬಿಂಬಿಸಿವೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ. ಗುರುಮೂರ್ತಿ, ಪ್ರೊ.ಪಿ. ನಂಜುಂಡ, ಪ್ರೊ.ವಿ. ಭಾಸ್ಕರ್‌, ಜಗದೀಶ್‌ ನಡುವಿನ ಮಠ, ಡಾ. ಭವಾನಿ, ಸೀಮಾಕೌಸರ್, ಅಬ್ದುಲ್‌ ರಹೀಂ, ಸುಷ್ಮಾ, ಚಂದ್ರಪ್ರಭಾ, ಶ್ರೀರಂಗರ ನಾಟಕಗಳನ್ನು ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶ್ರೀಧರ್‌ ಸ್ವಾಗತಿಸಿದರು. ಮಧು ವಂದಿಸಿದರು. ಎಸ್‌.ಮಂಜುನಾಥ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.