ADVERTISEMENT

ಸಚಿವರಿಗೆ ಸ್ವಗ್ರಾಮದಲ್ಲಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 10:45 IST
Last Updated 19 ಜುಲೈ 2012, 10:45 IST

ಚನ್ನಪಟ್ಟಣ: ಪಡಿತರ ಚೀಟಿ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನದಲ್ಲಿ ಉಂಟಾಗಿರುವ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಸಾರ್ವಜನಿಕರು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾಲ್ಲೂಕಿನ ಚಕ್ಕೆರೆಯಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ನಡೆಯಿತು.

ಸಚಿವರ ಸ್ವಗ್ರಾಮ ಚಕ್ಕೆರೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಇದೇ ಮೊದಲ ಬಾರಿಗೆ ಇಂತಹ ಸಭೆ ಏರ್ಪಡಿಸಲಾಗಿತ್ತು. ಆದರ ಸಾರ್ವಜನಿಕರ ದಿಢೀರ್ ಅಸಮಾಧಾನದಿಂದ ಸಚಿವ ಯೋಗೇಶ್ವರ್ ಕೊಂಚ ಇರುಸುಮುರುಸು ಅನುಭವಿಸಬೇಕಾಯಿತು.

ಸಭೆ ಆರಂಭವಾಗುತ್ತಿದ್ದಂತೆಯೇ ವೃದ್ಧಾಪ್ಯವೇತನಕ್ಕೆ ಸಂಬಂಧಿಸಿದ ವಿವಿಧ ಗ್ರಾಮಗಳ ಪಟ್ಟಿಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಓದಿದರು. ಕೂಡಲೇ ಪಟ್ಟಿಯಲ್ಲಿ ಹೆಸರಿಲ್ಲದ ಫಲಾನುಭವಿಗಳು ವೇದಿಕೆಗೆ ನುಗ್ಗಿ ಗೊಂದಲ ಸೃಷ್ಟಿಸಿದರು. ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪತ್ರಗಳನ್ನು ತೋರಿಸಿದ ಅವರು ಅರ್ಜಿ ಸಲ್ಲಿಸಿ ಹಲವಾರು ತಿಂಗಳುಗಳೇ ಕಳೆದಿದ್ದರೂ ನಮ್ಮ ಹೆಸರನ್ನು ಪಟ್ಟಿಯಲ್ಲಿ ಏಕೆ ಸೇರಿಸಿಲ್ಲ ಎಂದು ಅಧಿಕಾರಿಗಳು ಹಾಗೂ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಎದ್ದುನಿಂತು ಮಾತನಾಡಿದ ಸಚಿವ ಯೋಗೇಶ್ವರ್, ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದಲೇ ಸಭೆ ನಡೆಸುತ್ತಿದ್ದೇವೆ. ಗೊಂದಲ ಬೇಡ. ಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ಹೆಸರುಗಳನ್ನು ನೀಡಲಿ. ಅವುಗಳನ್ನು ಸೇರಿಸಿಕೊಳ್ಳುತ್ತೇವೆ ಎಂದರೂ ಕೇಳದೆ ವೇದಿಕೆಗೆ ನುಗ್ಗುತ್ತಿದ್ದ ಜನರನ್ನು ತಡೆಯಲು ಪೊಲೀಸರು ಸಾಹಸ ಪಡಬೇಕಾಯಿತು.

ಈ ವೇಳೆ ಸಾರ್ವಜನಿಕರನ್ನು ಸಮಾಧಾನಪಡಿಸಲು ಯತ್ನಿಸಿದ ಯೋಗೇಶ್ವರ್, ವೃದ್ಧಾಪ್ಯ ವೇತನ ವಿಚಾರದಲ್ಲಿ ಈ ಹಿಂದೆ ಹಲವಾರು ತಪ್ಪುಗಳಾಗಿವೆ. ಅರ್ಹರಲ್ಲದವರು ವೇತನ ಪಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಕೆಲವರ ಹೆಸರನ್ನು ಈಗಾಗಲೇ ರದ್ದುಪಡಿಸಲಾಗಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವುದರಿಂದ ಈ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು.

ನಂತರ ಈ ವಿಚಾರದಲ್ಲಿ ತಹಸಿಲ್ದಾರ್ ಅರುಣಪ್ರಭ ಹಾಗೂ ಗ್ರಾ.ಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಯೋಗೇಶ್ವರ್, ಮುಂದಿನ 15 ದಿನಗಳೊಳಗೆ ಚಕ್ಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿಯ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹರಿಸುವಂತೆ ತಾಕೀತು ಮಾಡಿದರು.

ನಂತರ ಮಾತನಾಡಿದ ತಹಸೀಲ್ದಾರ್ ಅರುಣಪ್ರಭ, ವೃದ್ಧಾಪ್ಯ ವೇತನಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಸಲ್ಲಿಸುವುದು ಬೇಡ. ಸೂಕ್ತ ದಾಖಲಾತಿಗಳನ್ನು ನೀಡಿರುವ ಎಲ್ಲರಿಗೂ ಮುಂದಿನ ಗ್ರಾಮ ಸಭೆಯೊಳಗೆ ಮಂಜೂರಾತಿ ಪತ್ರ ನೀಡುತ್ತೇವೆ ಎಂದರು.

ಸಭೆಯಲ್ಲಿ ಚಕ್ಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರವಿ, ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ರವಿಕುಮಾರ್, ಆಹಾರ ನಿರೀಕ್ಷಕ ಮಲ್ಲಿಕಾರ್ಜುನ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ತೋಟಗಾರಿಕಾ ಇಲಾಖೆ ಅಧಿಕಾರಿ ಗುಣವಂತ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.