ADVERTISEMENT

ಸಮ್ಮೇಳನ, ಧರ್ಮ ಸಂಸತ್ ರಾಜಕೀಯ ಪ್ರೇರಿತ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 5:23 IST
Last Updated 29 ನವೆಂಬರ್ 2017, 5:23 IST
ಹುಲುವಾಡಿ ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು
ಹುಲುವಾಡಿ ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು   

ಚನ್ನಪಟ್ಟಣ: ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಧರ್ಮ ಸಂಸತ್ ಸಭೆಗಳು ರಾಜಕೀಯ ಪ್ರೇರಿತ ಸಭೆಗಳಾಗಿವೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.‌

ತಾಲ್ಲೂಕಿನ ಹುಲುವಾಡಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಸಾಹಿತ್ಯದ ಹೆಸರಿನಲ್ಲಿ ಮೈಸೂರಿನಲ್ಲಿ ಸಭೆ ನಡೆಸಿದರು. ಬಿಜೆಪಿಯವರು ಉಡುಪಿಯಲ್ಲಿ ಧರ್ಮದ ಹೆಸರಿನಲ್ಲಿ ಸಭೆ ನಡೆಸಿ ಚುನಾವಣಾ ಪ್ರಚಾರ ಮಾಡಿದರು ಎಂದು ಟೀಕಿಸಿದರು. ‌

ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದಾರಮಯ್ಯ ಅವರು ಜಿಲ್ಲೆಯ ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳಲು ₹8 ಕೋಟಿ ಹಣ ವ್ಯಯ ಮಾಡಿದ್ದಾರೆ. ಈ ಹಿಂದೆ ನಡೆದ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಇಷ್ಟು ಹಣ ಕೊಟ್ಟ ನಿದರ್ಶನ ಗಮನಕ್ಕೆ ಬಂದಿಲ್ಲ. ಸರ್ಕಾರದ ಹಣ ಬಳಸಿಕೊಂಡು ಸಾಹಿತ್ಯದ ಹೆಸರಿನಲ್ಲಿ ರಾಜಕೀಯ ಸಮ್ಮೇಳನ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಉತ್ತರ ಪ್ರದೇಶದಲ್ಲಿ ರಾಮಮಂದಿರ ಕಟ್ಟಬೇಕು ಎಂದರೆ ಅಯೋಧ್ಯೆಯಲ್ಲಿ ಈ ಧರ್ಮ ಸಭೆ ಮಾಡಬೇಕು. ಅದನ್ನು ಬಿಟ್ಟು ಕರ್ನಾಟಕದಲ್ಲಿ ಸಭೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಮನ ಹೆಸರು ಹೇಳಿಕೊಂಡು ಬಿಜೆಪಿಯವರು ಇಂತಹ ಸಭೆ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂವಿಧಾನದ ಹೇಳಿಕೆ ನೀಡಿ ಬಾಯಿ ಚಪಲ ತೀರಿಸಿಕೊಳ್ಳುವುದು ಸರಿಯಲ್ಲ. ಸಂವಿಧಾನ ಬದಲಿಸಬೇಕು ಎಂಬ ಹೇಳಿಕೆಯಿಂದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಪೇಜಾವರ ಶ್ರೀಗಳ ಸಂವಿಧಾನ ತಿದ್ದುಪಡಿ ಹೇಳಿಕೆ ತಿರುಗೇಟು ನೀಡಿದರು.

ಮುಂಬರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.