ADVERTISEMENT

ಸಶಕ್ತ ಲೋಕಪಾಲ ಮಸೂದೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ....

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2011, 19:30 IST
Last Updated 16 ಆಗಸ್ಟ್ 2011, 19:30 IST
ಸಶಕ್ತ ಲೋಕಪಾಲ ಮಸೂದೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ....
ಸಶಕ್ತ ಲೋಕಪಾಲ ಮಸೂದೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ....   

ರಾಮನಗರ: ಸಶಕ್ತ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮಂಗಳವಾರದಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ರಾಮನಗರದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಶೇಷಾದ್ರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮೂರು ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಅಣ್ಣಾ ಅವರ ಹೋರಾಟ ಬೆಂಬಲಿಸಿ ಜ್ಲ್ಲಿಲಾ ಕೇಂದ್ರದ ಮಿನಿ ವಿಧಾನಸೌಧದ ಮುಂಭಾಗ ಬೆಳಿಗ್ಗೆಯಿಂದ ಶೇಷಾದ್ರಿ ಅವರ ನೇತೃತ್ವದಲ್ಲಿ ಉಪವಾಸ ನಿರಶನ ನಡೆಯುತ್ತಿದೆ.

`ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಲೋಕಪಾಲ್ ಮಸೂದೆ ದುರ್ಬಲವಾಗಿದೆ. ಇದರ ವ್ಯಾಪ್ತಿಗೆ ನ್ಯಾಯಾಂಗ ಇಲಾಖೆ, ಪ್ರಧಾನ ಮಂತ್ರಿ ಹಾಗೂ ಸಂಸದರನ್ನು ತಾರದಿರುವುದೇ ಇದು ದುರ್ಬಲ ಎಂಬುದನ್ನು ತೋರಿಸುತ್ತದೆ. ಅಲ್ಲದೆ ಲೋಕಪಾಲ್‌ಗೆ ನೀಡಿದ ದೂರು ಸಮಂಜಸವಾಗಿ ಇಲ್ಲದಿದ್ದರೆ, ಆ ದೂರು ನೀಡಿದವರಿಗೆ ಎರಡು ವರ್ಷ ಸಜೆ ನೀಡುವುದನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ.

ಆದರೆ ತಪ್ಪಿತಸ್ತರಿಗೆ ಕೇವಲ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸುವುದಾಗಿ ಹೇಳಿರುವುದು ಅವೈಜ್ಞಾನಿಕವಾಗಿದೆ~ ಎಂದು ಶೇಷಾದ್ರಿ ಟೀಕಿಸಿದರು. ಶಾಂತಿಯುತವಾಗಿ ಪ್ರತಿಭಟಿಸಲು ಮುಂದಾದ ಅಣ್ಣಾ ಹಜಾರೆ ಅವರನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸಂವಿಧಾನ ದತ್ತವಾಗಿ ದೊರೆತಿರುವ ಹಕ್ಕುಗಳನ್ನು ಕೇಂದ್ರ ಮತ್ತು ದೆಹಲಿ ಸರ್ಕಾರ ಉಲ್ಲಂಘಿಸಿದೆ ಎಂದು ದೂರಿದರು.

ಜಾನಪದ ಕಲಾವಿದ ಆಲೂರು ನಾಗಪ್ಪ, ನಗರಸಭೆ ಸದಸ್ಯರಾದ ಶಿವಕುಮಾರ ಸ್ವಾಮಿ, ಮಣಿ, ಗೋಪಾಲ್, ಸಮತಾ ಸೈನಿಕ ದಳದ ಗೋವಿಂದಯ್ಯ, ದಲಿತ ಮುಖಂಡ ಮೋಹನ್ ಕುಮಾರ್, ಮುಖಂಡರಾದ ಸುರೇಶ್, ಸಿ.ನಾಗರಾಜ್ ಮೊದಲಾದವರು ನಿರಶನದಲ್ಲಿ ಪಾಲ್ಗೊಂಡಿದ್ದರು.
`ಸಂಭ್ರಮದ ಹಿಂದೆ ಸೂತಕ~

ಕನಕಪುರ:  65ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಆಚರಿಸಿದ ಮಾರನೆ ದಿನವೇ ನಮಗೆ ಸ್ವತಂತ್ರ ಇಲ್ಲದಂತಾಗಿದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್.ಪುಟ್ಟಮಾದಯ್ಯ ವಿಷಾದ ವ್ಯಕ್ತಪಡಿಸಿದರು.

ಪಟ್ಟಣ ತಾಲ್ಲೂಕು ಕಛೇರಿ ಮುಂಭಾಗ ತಾಲ್ಲೂಕು ಭ್ರಷ್ಟಾಚಾರ ವಿರೋಧಿ ವೇದಿಕೆ, ವಕೀಲರ ಸಂಘ, ರಕ್ಷಣಾ ವೇದಿಕೆ, ಜಯಕರ್ನಾಟಕ, ಹಿಂದು ಜಾಗರಣ ವೇದಿಕೆ, ಪತ್ರಕರ್ತರ ಸಂಘ, ಕರ್ನಾಟಕ ಸಂಘ ಸೇರಿದಂತೆ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ  `ಅಣ್ಣಾ ಹಜಾರೆಯವರ ಹೋರಾಟವನ್ನು ಬೆಂಬಲಿಸಿ ಆಯೋಜಿಸಿದ್ದ ಧರಣಿಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ.    ಒಮ್ಮೆ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ನೂರಾರು ಕೋಟಿ ರೂಪಾಯಿ ಆಸ್ತಿ, ಸಂಪತ್ತು ಗಳಿಸುತ್ತಾರೆ. ಇಂತಹ ಭ್ರಷ್ಟಾಚಾರವನ್ನು ತಡೆಗಟ್ಟಲು  ಅಣ್ಣಾ ಹಜಾರೆಯವರು `ಜನ ಲೋಕಪಾಲ್ ಮಸೂದೆಯನ್ನು ಜಾರಿಗಾಗಿ ಒತ್ತಾಯಿಸಿ ನಡೆಸುತ್ತಿರುವ ಅಹಿಂಸವಾದ ಸತ್ಯಾಗ್ರಹವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಜನ ಲೋಕಪಾಲ್ ಮಸೂದೆಗೆ ಒತ್ತಾಯಿಸಿ ಅಣ್ಣಾ ಹಜಾರೆ ಕೈಗೊಂಡಿರುವ ಈ ಹೋರಾಟಕ್ಕೆ ಪ್ರತಿಯೊಬ್ಬ ಭಾರತೀಯರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ರೈತ ಸಂಘದ ಸಂಪತ್‌ಕುಮಾರ್, ನಾಗರಾಜು, ಹಿಂದುಜಾಗರಣಾ ವೇದಿಕೆಯ ಎ.ಪಿ.ಕೃಷ್ಣಪ್ಪ, ಜಯಕರ್ನಾಟಕ ಸಂಘಟನೆಯ ರಾಮಚಂದ್ರು, ಕರ್ನಾಟಕ ಸಂಘದ ಮರಳವಾಡಿ ಉಮಾಶಂಕರ್, ಎ.ಬಿ.ವಿ.ಪಿ. ರಘುರಾಮ್ ಸೇರಿದಂತೆ ಮತ್ತಿತರರು ಮಾತನಾಡಿದರು. ಕೊನೆಯಲ್ಲಿ ಭ್ರಷ್ಟಾಚಾರವನ್ನು ತಡೆಯಲು ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು, 

 ತಾಲ್ಲೂಕು ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಚಾಲಕ ವಕೀಲ ನಂಜೇಗೌಡ ಸತ್ಯಾಗ್ರಹ ಧರಣಿಯ ನೇತೃತ್ವವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಮುತ್ತೇಗೌಡ, ಕಾರ್ಯದರ್ಶಿ ಎಸ್.ವಿ.ವೀರಪ್ಪ, ಜೆ.ಮಹದೇವು, ದೇವದಾಸು, ಸಂಘಟನೆಯ ಮುಖಂಡರುಗಳಾದ ಕಬ್ಬಾಳೇಗೌಡ, ಪುಟ್ಟಸ್ವಾಮಿ, ಸ್ಟುಡಿಯೋ ಚಂದ್ರು, ಹೆಚ್.ಕೆ.ಕೃಷ್ಣಪ್ಪ ಸೇರಿದಂತೆ ಅನೇಕರು ಹಾಜರಿದ್ದರು.

ಕೋರ್ಟ್‌ಕಲಾಪ ಸ್ಥಗಿತ: ಅಣ್ಣ ಹಜಾರೆ ಹೋರಾಟ ಬೆಂಬಲಿಸಿ ತಾಲ್ಲೂಕು ಭ್ರಷ್ಟಾಚಾರ ವಿರೋಧಿ ವೇದಿಕೆ ಹಮ್ಮಿಕೊಂಡಿದ್ದ ಸತ್ಯಾಗ್ರಹ ಧರಣಿಗೆ ವಕೀಲರ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ವಕೀಲರು ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಪಾಲ್ಗೊಳ್ಳದೆ ಧರಣಿಯಲ್ಲಿ ಪಾಲ್ಗೊಂಡಿದ್ದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.