ADVERTISEMENT

ಹಳ್ಳಿಗಾಡಿನ ರಸ್ತೆಗಳ ಸ್ಥಿತಿ ಶೋಚನೀಯ

ಅಲ್ಲಲ್ಲಿ ಗುಂಡಿಗಳು: ಕೆಲವಡೆ ಕಚ್ಚಾ ಹಾದಿಯೇ ಸವಾರರಿಗೆ ಗತಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2016, 8:38 IST
Last Updated 5 ಆಗಸ್ಟ್ 2016, 8:38 IST
ಹಳ್ಳಿಗಾಡಿನ ರಸ್ತೆಗಳ ಸ್ಥಿತಿ ಶೋಚನೀಯ
ಹಳ್ಳಿಗಾಡಿನ ರಸ್ತೆಗಳ ಸ್ಥಿತಿ ಶೋಚನೀಯ   

ರಾಮನಗರ: ಮಳೆಗಾಲ ಬಂತೆಂದರೆ ರಸ್ತೆಗಳ ನಿಜವಾದ ಬಣ್ಣ ಬಯಲಾಗುತ್ತದೆ. ಪ್ರತಿ ಹಾದಿಯ ಮೈ ತುಂಬ ಹೊಂಡಗಳು, ಅವುಗಳೊಳಗೆ ನಿಂತಿರುವ ಮಳೆ ನೀರು, ಹೆಜ್ಜೆ ಇಟ್ಟರೆ ಜಾರುವ ಮಣ್ಣು... ಹೀಗೆ ಇವುಗಳ ಮೇಲೆ ಸಂಚರಿಸಲು ಸರ್ಕಸ್‌ ನಡೆಸಬೇಕಾಗುತ್ತದೆ.

ರಾಮನಗರ ತಾಲ್ಲೂಕು ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದ ಕೆಲವು ರಸ್ತೆಗಳ ಸ್ಥಿತಿ ಮೇಲಿನದ್ದಕ್ಕಿಂತ ಭಿನ್ನ ಏನಿಲ್ಲ. ಇಲ್ಲಿಯೂ ರಸ್ತೆಗಳ ಮಧ್ಯೆ ಸಾಕಷ್ಟು ಹೊಂಡಗಳು ಬಾಯಿ ತೆರೆದು ಕುಂತಿವೆ. ಮಳೆ ಬಂದ ಸಮಯದಲ್ಲಿ ಇವು ಕೆಸರುಮಯವಾಗುತ್ತವೆ.

ರಾಮನಗರದಿಂದ ಮಾಗಡಿ ಹಾಗೂ ಜಾಲಮಂಗಲ ಕಡೆಗೆ ಹೋಗುವ ಮುಖ್ಯರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ. ಆದರೆ ಮುಂದಿನ ಮಾರ್ಗವೂ ಹಾಗೆಯೇ ಇರಲಿದೆ ಎಂದುಕೊಂಡು ಎಡಬಲದ ಉಪರಸ್ತೆಗಳಿಗೆ ಹೊರಳಿದರೆ ಈ ಅಭಿಪ್ರಾಯ ಬದಲಾಗುತ್ತದೆ.

ರಾಮನಗರದಿಂದ ಬಿಳಗುಂಬವರೆಗೆ ಉತ್ತಮ ರಸ್ತೆ ಇದೆ. ಆದರೆ ಅಲ್ಲಿಂದ ಬಲಕ್ಕೆ ಹೊರಳಿದರೆ ಜಲಸಿದ್ಧೇಶ್ವರ ಬೆಟ್ಟದವರೆಗಿನ ಹಾದಿಯೂ ಇನ್ನೂ ಕಚ್ಚಾ ಸ್ಥಿತಿಯಲ್ಲಿಯೇ ಇದೆ. ಕಡಿದಾದ ಇಳಿಜಾರು, ಅಲ್ಲಲ್ಲಿ ಚೆಲ್ಲಿರುವ ಜಲ್ಲಿಕಲ್ಲುಗಳು, ಜಾರುವ ನೆಲ... ಎಲ್ಲವೂ ಸಂಚಾರಕ್ಕೆ ಸವಾಲು ಎಸೆಯುವಂತಿವೆ. ಅಲ್ಲಿಂದ ಮತ್ತೆ ರಾಮನಗರದ ಕಡೆಗೆ ಕಚ್ಚಾ ರಸ್ತೆ ಇದ್ದು, ಇದು ಕೂಡ ಇನ್ನಷ್ಟೇ ಡಾಂಬರು ಭಾಗ್ಯ ಕಾಣಬೇಕಿದೆ.

ಬಿಡದಿ ಪಟ್ಟಣವನ್ನು ಮೈಸೂರು–ಬೆಂಗಳೂರು ಹೆದ್ದಾರಿ ಸೀಳಿಕೊಂಡು ಸಾಗುವ ಕಾರಣ ಈ ಪಟ್ಟಣಕ್ಕೆ ಉತ್ತಮ ರಸ್ತೆ ಸಂಪರ್ಕ ಇದೆ. ಆದರೆ ಹೋಬಳಿಯ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸಿಲ್ಲ.

ಇಲ್ಲಿಯ ಅನೇಕ ಕಡೆ ಇನ್ನೂ ಕಲ್ಲು ಕ್ರಷರ್‌ಗಳು ಸದ್ದು ಮಾಡುತ್ತಿವೆ. ಇವುಗಳಲ್ಲಿನ ಕಲ್ಲು, ದೂಳನ್ನು ಹೊತ್ತು ನಿತ್ಯ ಹತ್ತಾರು ಲಾರಿಗಳು ಸಂಚರಿಸುತ್ತವೆ. ಇವುಗಳ ಭಾರಕ್ಕೆ ನಲುಗಿ  ಹಳ್ಳಿಗಳ ರಸ್ತೆಗಳು ತಮ್ಮ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. ಚಿಕ್ಕಅರಸನದೊಡ್ಡಿ, ಮಂಚೇಗೌಡನ ಪಾಳ್ಯ ಮೊದಲಾದ ಕಡೆಗಳಿಗೆ ಹೋಗುವ ರಸ್ತೆಗಳು ಸಂಪೂರ್ಣ ಕಿತ್ತುಹೋಗಿವೆ.

‘ನಿತ್ಯ ಹತ್ತಾರು ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಅವುಗಳ ನಡುವೆ ದ್ವಿಚಕ್ರ ವಾಹನಗಳಲ್ಲಿ ತೆರಳಲು ಹೆದರಿಕೆಯಾಗುತ್ತದೆ.
ಬಿಡದಿಯಿಂದ ಶ್ಯಾನ ಮಂಗಲದವರೆಗೆ ಅರ್ಧದವರೆಗೆ ಉತ್ತಮ ರಸ್ತೆ ಇದೆ. ಆದರೆ ಮುಂದೆ ಹೋದಂತೆಲ್ಲ ಈ ಹಾದಿ ಕಿರಿದಾಗುತ್ತಲೇ ಹೋಗುತ್ತದೆ. ಕೊನೆಗೆ ಇಡೀ ರಸ್ತೆಯಲ್ಲಿ ಮಣ್ಣು ಬಿಟ್ಟರೆ ಬೇರೇನು ಕಾಣದಂತಹ ಪರಿಸ್ಥಿತಿ ಇದೆ.

‘ಅರ್ಧ ರಸ್ತೆ ಡಾಂಬರೀಕ ರಣಗೊಂಡು ವರ್ಷದ ಮೇಲಾಯಿತು. ಪ್ರಮುಖ ಕಾರ್ಖಾನೆಗಳು ಇರುವ ಕಾರಣ ಅಲ್ಲಿಯವರೆಗೂ ಡಾಂಬರು ಹಾಕಿದ್ದು, ಅಲ್ಲಿಂದ ಮುಂದಿನ ಹಾದಿಯನ್ನು ಹಾಗೆಯೇ ಬಿಡಲಾಗಿದೆ. ಹೀಗಾಗಿ ಜನ ಅನಿವಾರ್ಯವಾಗಿ ಇದೇ ಕೆಸರು ಹಾದಿಯಲ್ಲಿ ಓಡಾಡುವಂತಾಗಿದೆ’ ಎಂದು ವಿವರಿಸುತ್ತಾರೆ  ಸ್ಥಳೀಯರಾದ ವೆಂಕಟೇಶ್‌.
ಪ್ರವಾಸಿ ತಾಣಗಳಿಗೆ ತೆರಳುವ ಕೆಲವು ರಸ್ತೆಗಳೂ ಹಾಳಾಗಿವೆ. ಮಂಚನಬೆಲೆ–ಸಾವನದುರ್ಗ ನಡುವೆ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ವಾರಾಂತ್ಯದಲ್ಲಿ ಬೈಕು, ಕಾರುಗಳು ಅಬ್ಬರದಿಂದ ನುಗ್ಗುತ್ತವೆ. ಆದರೆ ಇವುಗಳ ವೇಗ ನಿಯಂತ್ರಿಸಲಿಕ್ಕೆ ಎಂಬಂತೆ ಒಳ ರಸ್ತೆಗಳಲ್ಲಿ ಗುಂಡಿಗಳು ಹುಟ್ಟಿಕೊಂಡಿವೆ. ಹಳ್ಳಿಗಳ ಒಳ ರಸ್ತೆಗಳಿಗೂ ಉತ್ತಮ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಈ ಭಾಗದ ಜನರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.