ADVERTISEMENT

ಹಿಂದುಳಿದ, ಅಲ್ಪಸಂಖ್ಯಾತ ಸಮಿತಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2012, 4:45 IST
Last Updated 24 ಆಗಸ್ಟ್ 2012, 4:45 IST

ಚನ್ನಪಟ್ಟಣ: `ಸಾಹಿತ್ಯ ಚಟುವಟಿಕೆಯನ್ನು ಎಲ್ಲಾ ವರ್ಗದವರಿಗೂ ತಲುಪಿಸುವ ಉದ್ದೇಶದಿಂದ ಕಸಾಪದಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಸಮಿತಿಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ~ ಎಂದು ಕೇಂದ್ರ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದರು.

ಪಟ್ಟಣದ ಪುರಭವನದಲ್ಲಿ ತಾಲ್ಲೂಕು ಕಸಾಪ ಮಂಗಳವಾರ ಏರ್ಪಡಿಸಿದ್ದ ಮುಂದಿನ ಮೂರು ವರ್ಷಗಳ ಅವಧಿಯ ಕಾರ್ಯ ಚಟುವಟಕೆಗಳ ಶುಭಾರಂಭ ಹಾಗೂ `ಹಚ್ಚೇವು ಕನ್ನಡದ ದೀಪ~ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರನ್ನು ಕಸಾಪದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಹಿಳೆಯರಿಗೆ ಉಪಾಧ್ಯಕ್ಷ ಸ್ಥಾನ ನೀಡಲು ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಪಿ.ಯೋಗೇಶ್ವರ್, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ತಾಲ್ಲೂಕು ಸಮೃದ್ಧವಾಗಿದೆ. ಪಟ್ಟಣದ ಜನತೆ ಮತ್ತು ಸಾಹಿತ್ಯಾಸ್ತಕರಿಗೆ ಉತ್ತಮ ಗ್ರಂಥಾಲಯ, ಕನ್ನಡ ಭವನ, ಸಾಂಸ್ಕೃತಿಕ ಭವನ ಹಾಗೂ ಪತ್ರಕರ್ತರ ಭವನಗಳ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಕೆ.ಶಿವಪ್ಪ ಮತ್ತು ನಿಕಟಪೂರ್ವ ಅಧ್ಯಕ್ಷ ಎಚ್.ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಗರಸಭಾ ಅಧ್ಯಕ್ಷೆ ರೇಷ್ಮಭಾನು, ಉಪಾಧ್ಯಕ್ಷ ಕೆ.ಎಲ್.ಕುಮಾರ್, ತಾ.ಪಂ. ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಸವಿತಾ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ, ಕನ್ನಡಪರ ಹೋರಾಟಗಾರ ಸಿಂ.ಲಿಂ. ನಾಗರಾಜು, ರೈತಸಂಘದ ಸಿ.ಪುಟ್ಟಸ್ವಾಮಿ, ಕೆ.ಎಸ್.ಲಕ್ಷ್ಮಣಸ್ವಾಮಿ, ಎಂ. ರಾಮು, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಕೃಷ್ಣೇಗೌಡ, ಸು.ತ.ರಾಮೇಗೌಡ ಮುಂತಾದವರು ಹಾಜರಿದ್ದರು.

ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಗೌರವ ಕಾರ್ಯದರ್ಶಿ ರಾಮಕೃಷ್ಣಯ್ಯ ನಿರೂಪಿಸಿದರು. ಗಾಯಕರಾದ ಹೊನ್ನಿಗಾನಹಳ್ಳಿ ಸಿದ್ದರಾಜು, ಚೌ.ಪು.ಸ್ವಾಮಿ, ಶಾರದ ನಾಗೇಶ್ ತಂಡದವರು `ಗೀತಗಾಯನ~ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.