ADVERTISEMENT

ಹೊಸ ಶುಲ್ಕ ನೀತಿ: ಎಬಿವಿಪಿ ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 4:45 IST
Last Updated 15 ಅಕ್ಟೋಬರ್ 2012, 4:45 IST

ರಾಮನಗರ: ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಪದವಿ ತರಗತಿಗಳ ಪ್ರವೇಶಕ್ಕೆ ವಿಧಿಸಲಾಗಿರುವ ಶುಲ್ಕ ನೀತಿ ಅವೈಜ್ಞಾನಿಕವಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸಿದೆ.

ಈ ವರ್ಷದಿಂದ ಪದವಿ ತರಗತಿಗಳ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಪೂರ್ಣ ಪ್ರಮಾಣದ ಶುಲ್ಕವನ್ನು ವಿದ್ಯಾರ್ಥಿಗಳೇ ಭರಿಸಬೇಕೆಂದು ಆದೇಶ ಹೊರಡಿಸಿದೆ. ಇದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಎಬಿವಿಪಿ ಆಗ್ರಹಿಸಿದೆ.

ಈ ಹಿಂದೆ ಹಿಂದುಳಿದ ವರ್ಗದ (ಪ್ರವರ್ಗ 2ಎ, 3ಎ, 3ಬಿ) ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಮತ್ತು ಮತ್ತು ಪರೀಕ್ಷಾ ಶುಲ್ಕವನ್ನು ಸರ್ಕಾರವು ಕಾಲೇಜುಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಭರಿಸುತಿತ್ತು.

ಆದರೆ ಈ ವರ್ಷ ಕಾಲೇಜು ಹಾಗೂ ಸಮಾಜ ಕಲ್ಯಾಣ ಇಲಾಖೆಗಳಿಗೆ ಹಣ ನೀಡುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳು ತಮ್ಮ ಪ್ರವೇಶ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಕಾಲೇಜುಗಳ ಮೂಲಕ ಸರ್ಕಾರಕ್ಕೆ ಭರಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಲಾಗಿದೆ.

ಇದರನ್ವಯ ಪ್ರತಿ ವಿದ್ಯಾರ್ಥಿಯೂ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು. ಸರ್ಕಾರ ಆ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡುವುದಾಗಿ ತಿಳಿಸಿದೆ. ಕಳೆದ ವರ್ಷ ಅಂಕಪಟ್ಟಿ ಶುಲ್ಕ ರೂ.90, ಅರ್ಜಿ ಶುಲ್ಕ ರೂ.150 ಮಾತ್ರ ಪಾವತಿಸಬೇಕಿತ್ತು.

ಆದರೆ ಪ್ರಸಕ್ತ ಸಾಲಿನಲ್ಲಿ ರೂ.1497 ಪಾವತಿಸಬೇಕಿದೆ. ಇದು ಬಡ ವಿದ್ಯಾರ್ಥಿಗಳ ಪಾಲಿಗೆ ಕಷ್ಟದಾಯಕವಾಗಿ ಪರಿಣಮಿಸಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸುನಿಲ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಹಣವನ್ನು ಮರು ಪಾವತಿ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಈ ಕ್ರಮ ಅವೈಜ್ಞಾನಿಕವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸುವ ಸಂಭವ ಹೆಚ್ಚಿದೆ. ಬಡ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈ ನೀತಿಯನ್ನು ಕೂಡಲೇ ವಾಪಸು ಪಡೆದು ಹಳೆಯ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.