ಚನ್ನಪಟ್ಟಣ: ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಮಾಡದ ಕೆಲವು ಸಂಘ–ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ನೀಡುತ್ತಿರುವ ಆರೋಪಗಳು ಕೇಳಿ ಬರುತ್ತಿದ್ದು, ಇದನ್ನು ಇಲಾಖೆ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಟಿ.ನಾಗೇಶ್ ಹೇಳಿದರು.
ಪಟ್ಟಣದ ಅನುಗ್ರಹ ಕನ್ವೆನ್ಷನ್ ಹಾಲ್‌ನಲ್ಲಿ ಕಲ್ಪಶ್ರೀ ಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ವತಿಯಿಂದ ಏರ್ಪಡಿಸಿದ್ದ ‘ವಸಂತೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆ ಹಣ ಬಿಡುಗಡೆ ಮಾಡುವಾಗ ಕಾರ್ಯಕ್ರಮದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಧುಸೂಧನಾಚಾರ್ಯ ಜೋಷಿ ಮಾತನಾಡಿ, ತಾಲ್ಲೂಕು ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿದೆ. ಇಲ್ಲಿಯ ಕಲಾವಿದರು ಶ್ರೇಷ್ಠ ಸಾಧನೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಸು.ತ.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲವೇಗೌಡ, ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಸ್.ಆರ್. ಪ್ರಮೋದ್, ಜಂಟಿ ಕಾರ್ಯದರ್ಶಿ ಸಿ.ಮಧು, ಚೇತನ್‌ಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ನಾಗವಾರ ರಂಗಸ್ವಾಮಿ ಮುಂತಾದವರು ಹಾಜರಿದ್ದರು.
ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಗಂಗಾಧರಮೂರ್ತಿ ಸ್ವಾಗತಿಸಿ, ನಿರೂಪಿಸಿದರು. ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಎಂ.ಸಿ.ಸುಜೇಂದ್ರ ಬಾಬು ವಂದಿಸಿದರು.
ಇದೇ ಸಂದರ್ಭದಲ್ಲಿ ಎಂ.ಸಿ.ಸುಜೇಂದ್ರಬಾಬು ಮತ್ತು ತಂಡದಿಂದ ಕೂಚುಪುಡಿ ನೃತ್ಯ, ಸುಕನ್ಯಾ ಮತ್ತು ರಂಗಮಣಿ ತಂಡದಿಂದ ಶಾರದಾ ಸಂಕೀರ್ತನ, ಅನನ್ಯ ಮತ್ತು ತಂಡದಿಂದ ಭರತನಾಟ್ಯ, ಕೆ.ಪಿ.ಸಮೀಕ್ಷಾ ಮತ್ತು ತಂಡದಿಂದ ಕೂಚುಪುಡಿ ನೃತ್ಯ, ಅಮೂಲ್ಯ ಮತ್ತು ತಂಡದಿಂದ ನೃತ್ಯ ಸಂಭ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.