ADVERTISEMENT

ಸೆ.1ರಿಂದ ಪ್ರತಿ ಲೀಟರ್‌ ಹಾಲಿಗೆ ₹ 1 ಹೆಚ್ಚಳ: ಬಮೂಲ್‌ ನಿರ್ದೇಶಕ

ಹೆಬ್ಬಿದಿರುಮೆಟ್ಟಿಲು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 13:19 IST
Last Updated 18 ಸೆಪ್ಟೆಂಬರ್ 2019, 13:19 IST
ಹೆಬ್ಬಿದಿರುಮೆಟ್ಟಿಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದವರನ್ನು ಅಭಿನಂದಿಸಲಾಯಿತು
ಹೆಬ್ಬಿದಿರುಮೆಟ್ಟಿಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದವರನ್ನು ಅಭಿನಂದಿಸಲಾಯಿತು   

ಹಾರೋಹಳ್ಳಿ (ಕನಕಪುರ): ‘ಹೈನುಗಾರಿಕೆಯಿಂದರೈತರಿಗೆ ಅನುಕೂಲವಾಗುವಂತೆ‍ ಪ್ರತಿ ಲೀಟರ್‌ ಹಾಲಿಗೆ ಒಂದು ರೂಪಾಯಿ ಹೆಚ್ಚಿಸಲಾಗಿದ್ದು, ಸೆ.1ರಿಂದಲೇ ಜಾರಿಗೆ ಬರಲಿದೆ’ ಎಂದು ಬಮೂಲ್‌ ನಿರ್ದೇಶಕ ಹೊನ್ನಾಲಗನದೊಡ್ಡಿ ಹರೀಶ್‌ಗೌಡ ಹೇಳಿದರು.

ಇಲ್ಲಿನ ಹಾರೋಹಳ್ಳಿ ಹೋಬಳಿ ಹೆಬ್ಬಿದಿರುಮೆಟ್ಟಿಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ ₹ 25 ನೀಡಲಾಗುತ್ತಿದೆ. ಈಗ ಒಂದು ರೂಪಾಯಿ ಹೆಚ್ಚುವರಿಯಾಗಿ ನೀಡುತ್ತಿದ್ದು, ರೈತರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಒಕ್ಕೂಟ ಎಲ್ಲರೀತಿಯ ಪ್ರೋತ್ಸಾಹ ನೀಡುತ್ತದೆ’ ಎಂದರು.

ADVERTISEMENT

‘ಡೇರಿಗೆ ಕನಿಷ್ಠ 60 ದಿನ ಹಾಲು ಸರಬರಾಜು ಮಾಡಿರುವವರು ಅಕಾಲಿಕವಾಗಿ ಮರಣ ಹೊಂದಿದರೆ ಒಕ್ಕೂಟದಿಂದ ಒಂದು ಲಕ್ಷ ರೂಪಾಯಿ ನೀಡಲಾಗುವುದು. ಹಾಲು ಉತ್ಪಾದಕರ ಪ್ರತಿಭಾವಂತ, ಉತ್ತಮ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದು ತಿಳಿಸಿದರು.

‘ಡೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ನಿವೃತ್ತಿ ಸಮಯದಲ್ಲಿ ₹ 1ರಿಂದ ₹ 2 ಲಕ್ಷದವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಇ ಪ್ರಕಾಶ್ ಮಾತನಾಡಿ, ‘ಡೇರಿಗೆ ₹13,09,914 ವ್ಯಾಪಾರದ ಲಾಭ ಬಂದಿದ್ದು ಪ್ರತಿ ದಿನ 1,500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ನಿವ್ವಳ ಲಾಭವಾಗಿ ₹ 6,37,831 ಬಂದಿದ್ದು ಹಾಲು ಉತ್ಪಾದಕರಿಗೆ ಬೋನಸ್ ರೂಪದಲ್ಲಿ ₹ 3,03,885 ನೀಡಲಾಗಿದೆ. ಮೊದಲ ಬಾರಿಗೆಡೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು’ ಎಂದು ತಿಳಿಸಿದರು.

ಡೇರಿ ಅಧ್ಯಕ್ಷ ಮಾದೇಗೌಡ, ಉಪಾಧ್ಯಕ್ಷ ಶ್ರೀನಿವಾಸ್, ನಿರ್ದೇಶಕರಾದ ಎಚ್.ಕೆ ನಾರಾಯಣಪ್ಪ, ಚಿಕ್ಕಮರೀಗೌಡ, ಕೃಷ್ಣಪ್ಪ, ಈರೇಗೌಡ, ಮಹದೇವ, ರತ್ನಮ್ಮ, ನಾಗಮ್ಮ, ಕೃಷ್ಣಪ್ಪ, ಹಾಲು ಪರೀಕ್ಷಕ ರಾಮಕೃಷ್ಣ, ಸಹಾಯಕ ಶಿವಕುಮಾರ್, ಶುಚಿಗಾರ ಕರಿಯಪ್ಪ, ಮುಖಂಡರಾದ ಚನ್ನೇಗೌಡ, ರಾಜು, ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.