ADVERTISEMENT

ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 6:48 IST
Last Updated 23 ಜನವರಿ 2018, 6:48 IST

ಕಸಬಾ(ರಾಮನಗರ): ಇಲ್ಲಿನ ಕೆಂಜಿಗರಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು ಐದು ವರ್ಷ ಪ್ರಾಯದ ಹೆಣ್ಣು ಚಿರತೆ ಭಾನುವಾರ ರಾತ್ರಿ ಸೆರೆಸಿಕ್ಕಿದೆ.

ಆಗಿಂದಾಗ್ಗೆ ಚಿರತೆ ಕಾಣಿಸಿಕೊಂಡು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ರೈತರ ಹಸುವಿನ ಕರು, ಕುರಿ, ಮೇಕೆ, ಕೋಳಿ, ನಾಯಿಗಳನ್ನು ತಿಂದು ಹಾಕುತ್ತಿತ್ತು. ಚಿರತೆ ಹಾವಳಿಯಿಂದ ಸಾಕು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಗ್ರಾಮಸ್ಥರು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

ಜತೆಗೆ ಬೆಳಗಿನ ಸಮಯದಲ್ಲಿ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು, ಜಾನುವಾರು ಮೇಯಿಸಲು, ಗ್ರಾಮದ ಅಕ್ಕಪಕ್ಕದಲ್ಲಿ ಓಡಾಡಲು ಭಯವಾಗುತ್ತಿದೆ. ಈ ಗ್ರಾಮಕ್ಕೆ ಬಸ್‌ ಸೌಲಭ್ಯವಿಲ್ಲದೆ ಇರುವುದರಿಂದ ಮಕ್ಕಳನ್ನು ಕೇತೋಹಳ್ಳಿ ಮೂಲಕ ಮಾಯಗಾನಹಳ್ಳಿ ವೃತ್ತಕ್ಕೆ ಬಂದು ಬಸ್‌ ಹತ್ತಿಸಬೇಕು. ಆದರೆ ಚಿರತೆ ಭಯದಿಂದ ಜನರು ರಸ್ತೆಯಲ್ಲಿ ಓಡಾಡಲು ನಾವು ಭಯಭೀತರಾಗಿದ್ದೇವೆ. ಕೂಡಲೆ ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದರು.

ADVERTISEMENT

ಗ್ರಾಮಸ್ಥರ ಆಗ್ರಹಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಬೋನು ಇಟ್ಟಿದ್ದರು. ಬೋನಿಗೆ ಚಿರತೆ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳು ಚಿರತೆ ಬೋನನ್ನು ರಾಮನಗರದ ವಲಯ ಅರಣ್ಯಾಧಿಕಾರಿ ಕಚೇರಿಗೆ ತಂದು ಅದರ ಆರೋಗ್ಯ ತಪಾಸಣೆ ನಡೆಸಿ ದೂರದ ಕಾಡಿಗೆ ಬಿಟ್ಟರು. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ದಾಳೇಶ್, ಉಪ ವಲಯ ಅರಣ್ಯಾಧಿಕಾರಿ ರಾಜು, ಅರಣ್ಯ ರಕ್ಷಕರಾದ ರವಿ, ಸುನಿಲ್, ಚಂದ್ರು, ವೆಂಕಟಾಚಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.