ADVERTISEMENT

‘ಕನ್ನಡದಲ್ಲೂ ವಿಜ್ಞಾನ ಬರವಣಿಗೆ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 6:55 IST
Last Updated 2 ಫೆಬ್ರುವರಿ 2018, 6:55 IST
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರಿಗೆ ರೇಷ್ಮೆನಾಡು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕವಿ ಬಿ.ಆರ್. ಲಕ್ಷ್ಮಣರಾವ್, ಸಮ್ಮೇಳನಾಧ್ಯಕ್ಷ ಎಲ್‌.ಸಿ. ರಾಜು ಇದ್ದರು
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರಿಗೆ ರೇಷ್ಮೆನಾಡು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕವಿ ಬಿ.ಆರ್. ಲಕ್ಷ್ಮಣರಾವ್, ಸಮ್ಮೇಳನಾಧ್ಯಕ್ಷ ಎಲ್‌.ಸಿ. ರಾಜು ಇದ್ದರು   

ಕೂಟಗಲ್‌ (ರಾಮನಗರ): ಕೃಷಿ ವಿಜ್ಞಾನದಲ್ಲಿರುವ ಪದಗಳಿಗೆ ಕನ್ನಡದಲ್ಲಿ ಪರ್ಯಾಯ ಪರಿಭಾಷೆಗಳನ್ನು ರೂಪಿಸುವುದು ಕಷ್ಟ ಎಂಬ ವಾದದಲ್ಲಿ ಹುರುಳಿಲ್ಲ. ಅದು ಆಂಗ್ಲಭಾಷೆಯೇ ಶ್ರೇಷ್ಠ ಎಂಬ ಭ್ರಮೆಯಲ್ಲಿರುವವರು ಹುಟ್ಟುಹಾಕಿರುವ ನೆಪ ಮಾತ್ರ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು.

ಇಲ್ಲಿನ ಶಾನುಬೋಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬಸವೇಶ್ವರ ರಂಗಮಂದಿರದಲ್ಲಿ ಬುಧವಾರ ರಾತ್ರಿ ನಡೆದ ಆರನೆಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಇವತ್ತಿನ ರೈತ-ವಿಜ್ಞಾನಿ ಸಂವಾದ ಗೋಷ್ಠಿಯಲ್ಲಿ ನಡೆದ ಚರ್ಚೆಯಲ್ಲಿ ಬಳಕೆಯಾದ ಎಷ್ಟೋ ಪದಗಳು ಅಚ್ಚರಿ ಹುಟ್ಟಿಸುವಷ್ಟು ವಿಶೇಷವಾಗಿವೆ. ಇದರಿಂದ ವಿಜ್ಞಾನ ವಿಷಯಗಳನ್ನೂ ಕನ್ನಡ ಮಾಧ್ಯಮದಲ್ಲಿ ಕಲಿಯಲು ಸಾಧ್ಯವಿದೆ ಎಂಬುದನ್ನು ತಿಳಿಯಬಹುದಾಗಿದೆ ಎಂದರು.

ADVERTISEMENT

ಕನ್ನಡ ಎಲ್ಲ ಸಾಧ್ಯತೆಗಳನ್ನೂ ಒಳಗೊಂಡಿರುವ ಭಾಷೆ. ಇದಕ್ಕೆ ಯಾವುದೇ ಮಿತಿಗಳಿಲ್ಲ. ಕನ್ನಡದ ಶಕ್ತಿಯನ್ನು ಅರ್ಥ ಮಾಡಿಕೊಂಡು ಅದನ್ನು ಬಳಸಿದಾಗ ಕನ್ನಡ ಭಾಷೆ ಇನ್ನಷ್ಟು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿಯಲ್ಲಿ ಬೀಜರಹಿತ ಉತ್ಪಾದನೆ ಇರುವಂತೆಯೇ ಸಾಹಿತ್ಯದಲ್ಲಿಯೂ ಬೀಜರಹಿತ ಸಾಹಿತ್ಯ ಸೃಷ್ಟಿಯಾಗುತ್ತಿದೆ. ನೆಲಮೂಲ ಸಂಸ್ಕೃತಿಯ ಅರಿವಿಲ್ಲದೆ ರಚಿತವಾಗುವ ಸಾಹಿತ್ಯದಲ್ಲಿ ಸತ್ವ ಇರುವುದಿಲ್ಲ. ಇಂಥ ಬೀಜರಹಿತ ಸಾಹಿತ್ಯದಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಎಚ್.ಎಂ. ಶ್ವೇತಾಮಣಿ, ರಾಣಿ ಕಿರಣ್, ಬಿ.ಜಯದೇವ್, ಪೂರ್ಣಚಂದ್ರ ಹಾಗೂ ಕೃಷ್ಣಮೂರ್ತಿ ಭಾಗವಹಿಸಿ ಚರ್ಚಿಸಿದರು.

ವೆಂಕಟಾಚಲಯ್ಯ, ಅಪ್ಪಾಜಿ ಚನ್ನಮಾನಹಳ್ಳಿ, ಶಫೀಕ್ ಅಹಮದ್, ರಮಣಿ, ಶಶಿ ಕುಮಾರ್, ಡಾ. ಎಸ್.ಎನ್. ಮಧುಸೂದನ್, ಜಿ.ಎಚ್. ರಾಮಯ್ಯ, ಮಾಯಮ್ಮ, ಗಿರೀಶ್ ಕೊತ್ತೀಪುರ, ಸುರೇಂದ್ರ ಹಾಗೂ ವೀರಯೋಧನ ಪತ್ನಿ ಗಾಯಿತ್ರಮ್ಮ ಅವರಿಗೆ ರೇಷ್ಮೆನಾಡು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮ್ಮೇಳನಾಧ್ಯಕ್ಷ ಎಲ್‌.ಸಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ಅಶೋಕ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್, ಸಾಹಿತಿ ಎಂ. ಬೈರೇಗೌಡ, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಗೌರವ ಕಾರ್ಯದರ್ಶಿಗಳಾದ ಎಚ್.ಕೆ. ಶೈಲಾ ಶ್ರೀನಿವಾಸ್, ಜಿ.ಟಿ. ಕೃಷ್ಣ, ಹೋಬಳಿ ಘಟಕದ ಅಧ್ಯಕ್ಷ ಚಿನ್ನಗಿರಿಗೌಡ, ಪದಾಧಿಕಾರಿಗಳಾದ ರಾಜೇಶ್ ಕವಣಾಪುರ, ಕಿರಣ್‌ ಬಿಳಗುಂಬ, ಸಮದ್, ರಾಜೇಶ್, ಉಪನ್ಯಾಸಕರಾದ ಇಂದಿರಮ್ಮ, ಅಕ್ಕೂರು ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.