ADVERTISEMENT

ರಸ್ತೆ ಕಾಮಗಾರಿ ವಿಳಂಬ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 7:17 IST
Last Updated 10 ಫೆಬ್ರುವರಿ 2018, 7:17 IST

ರಾಮನಗರ: ನಗರದ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಯು ಮಂದಗತಿಯಲ್ಲಿ ಸಾಗಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಕೆಲವು ಕಡೆ ಚರಂಡಿಗಾಗಿ ರಸ್ತೆ ಬದಿಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ರಸ್ತೆಯ ಆಚೆ ಬದಿಯ ಅಂಗಡಿಗಳು ಸಂಪರ್ಕ ಕಳೆದುಕೊಂಡಿವೆ. ಇನ್ನೂ ಹಲವಡೆ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಐಜೂರು ವೃತ್ತದ ಸಮೀಪ ಜನನಿ ಮಕ್ಕಳ ಚಿಕಿತ್ಸಾ ಕೇಂದ್ರದ ಮುಂಭಾಗ ಚರಂಡಿ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಅದಕ್ಕೆ ಮೇಲುಹೊದಿಕೆಯನ್ನೂ ಹಾಕಿಲ್ಲ. ಪ್ಲಾಸ್ಟಿಕ್‌ ಚೀಲ. ಕಾಗದದ ಚೂರುಗಳು ಎಲ್ಲವನ್ನೂ ಬಳಸಿಕೊಂಡು ಕಾಂಕ್ರೀಟ್ ಸ್ಲ್ಯಾಬ್‌ ಹಾಕಲಾಗಿದೆ. ಕಾಮಗಾರಿ ಕಳಪೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

ಹೊಸದಾಗಿ ನಿರ್ಮಿಸಿದ ಚರಂಡಿ ಮಾರ್ಗವನ್ನು ಹಳೆಯದರ ಜೊತೆ ಜೋಡಿಸಲಾಗಿದೆ. ಈ ಕೊಳಕು ನೀರು ನೇರ ಅರ್ಕಾವತಿ ಒಡಲನ್ನು ಸೇರತೊಡಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಮನಸ್ಸು ಮಾಡಿಲ್ಲ.

‘ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇಲ್ಲಿನ ಅಂಗಡಿಗಳಿಗೆ ಸಂಪರ್ಕ ಇಲ್ಲದಂತೆ ಆಗಿದೆ. ಇದರಿಂದ ವಹಿವಾಟಿಗೂ ಹೊಡೆತ ಬಿದ್ದಿದೆ. ನಾವೇ ತಾತ್ಕಾಲಿಕವಾಗಿ ಕಲ್ಲುಗಳನ್ನು ಜೋಡಿಸಿಕೊಂಡು ಓಡಾಡುತ್ತಿದ್ದೇವೆ. ಮಕ್ಕಳ ಆಸ್ಪತ್ರೆ, ನಾಲ್ಕಾರು ಚಿಕಿತ್ಸಾ ಕೇಂದ್ರ, ಔಷಧಾಲಯಗಳು ಇಲ್ಲಿವೆ. ಮಕ್ಕಳು, ಹಿರಿಯರಿಗೆ ತೊಂದರೆ ಆಗಿದೆ’ ಎಂದು ಸ್ಥಳೀಯ ಮೆಡಿಕಲ್ ಸ್ಟೋರ್ ವ್ಯಾಪಾರಿ ಅನಿಲ್‌ ದೂರುತ್ತಾರೆ.

ಜಲ್ಲಿಕಲ್ಲಿನ ರಾಶಿ: ಸರ್ವೀಸ್ ರಸ್ತೆಯ ತುಂಬೆಲ್ಲ ಸದ್ಯ ಜಲ್ಲಿಕಲ್ಲಿನ ರಾಶಿಯನ್ನು ಸುರಿಯಲಾಗಿದೆ. ಬೈಕ್‌ ಸವಾರರು ಜಾರಿ ಬಿದ್ದು ಅಪಘಾತ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

‘ಬಿಡದಿಯಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಚನ್ನಪಟ್ಟಣಕ್ಕೆ ಮುಖವಾಗಿ ಮತ್ತೆ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲಾಗಿದೆ. ಆದರೆ ರಾಮನಗರದಲ್ಲಿ ಮಾತ್ರ ಕಾಮಗಾರಿ ಕುಂಟುತ್ತಾ ಸಾಗಿದೆ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇನ್ನಾದರೂ ತ್ವರಿತಗತಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸಬೇಕು’ ಎಂದು ಸ್ಥಳೀಯರಾದ ಮಲ್ಲಿಕಾರ್ಜುನ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.