ರಾಮನಗರ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ಹಮ್ಮಿಕೊಂಡಿದ್ದ ‘ಲೋಕಸಿರಿ-108’ ಕಾರ್ಯಕ್ರ
ರಾಮನಗರ: ‘ಜಾನಪದ ವಿದ್ವಾಂಸರಾಗಿದ್ದ ನಾಡೋಜ ಎಚ್.ಎಲ್. ನಾಗೇಗೌಡರು ಮುಂದಿನ ಪೀಳಿಗೆಗೆ ಜಾನಪದವನ್ನು ಪರಿಚಯಿಸಬೇಕೆಂಬ ದೂರದೃಷ್ಟಿಯೊಂದಿಗೆ ಜಾನಪದ ಲೋಕವನ್ನು ಅತ್ಯಂತ ಶ್ರಮಪಟ್ಟು ಕಟ್ಟಿದ್ದಾರೆ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.
ನಗರದ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಲೋಕಸಿರಿ-108’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಮೂಲ ಸಂಸ್ಕೃತಿಯ ಭಾಗವಾಗಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕು. ಆಗ ಮಾತ್ರ ನಮ್ಮತನವೂ ಉಳಿಯುತ್ತದೆ’ ಎಂದರು.
‘ಜಾನಪದ ಲೋಕದಲ್ಲಿ ವಿವಿಧ ಜಾನಪದ ಕಲೆಗಳಿಗೆ ಸಂಬಂಧಿಸಿದ ನೂರಾರು ಗಂಟೆಗಳು ಕೇಳುವಷ್ಟು ಮತ್ತು ನೋಡುವಷ್ಟು ಆಡಿಯೊ ಮತ್ತು ವಿಡಿಯೊಗಳ ದಾಖಲೆ ಇದೆ. ನಾಗೇಗೌಡರ ಅವಿರತ ಶ್ರಮದಿಂದಾಗಿ ಇದು ಸಾಧ್ಯವಾಗಿದೆ. ಲೋಕವು ಜಾನಪದವನ್ನು ಉಳಿಸಿ ಬೆಳೆಸುವುದಕ್ಕಾಗಿ ತನ್ನನ್ನು ತೊಡಗಿಸಿಕೊಂಡಿದೆ’ ಎಂದು ತಿಳಿಸಿದರು.
ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಸೂರ್ಯಪ್ರಕಾಶ್ ಮಾತನಾಡಿ, ‘ಜಾನಪದ ಲೋಕವು ನಾಡಿಗೆ ಹೆಮ್ಮೆಯಾಗಿದೆ. ಜಿಲ್ಲೆಯು ಹಲವು ಜಾನಪದ ಕಲೆಗಳ ತವರು. ನಮ್ಮ ಸಂಸ್ಕೃತಿಯ ಭಾಗವಾಗಿರುವ ಜಾನಪದ ಕಲೆಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು. ಮಕ್ಕಳಿಗೆ ನಮ್ಮ ನಾಡಿನ ಕಲೆಗಳನ್ನು ಚಿಕ್ಕಂದಿನಲ್ಲೇ ಪರಿಚಯಿಸುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.
ಸಂಘ ಪ್ರಧಾನ ಕಾರ್ಯದರ್ಶಿ ಟಿ. ಶಿವರಾಜು, ‘ಜಾನಪದ ಲೋಕ ಮತ್ತು ಪರಿಷತ್ತಿನ ಶ್ರಮದಿಂದಾಗಿ ಎಲೆಮರೆ ಕಾಯಿಯಂತೆ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದವರು ಇಂದು ಮುಖ್ಯವಾಹಿನಿಗೆ ಬಂದಿದ್ದಾರೆ. ಜಾನಪದ ಕಲೆಗಳಿಗೆ ಹಾಗೂ ಸಾಂಸ್ಕೃತಿಕ ರಾಯಭಾರಿಗಳಾದ ಕಲಾವಿದರಿಗೆ ಜನಪ್ರಿಯತೆ ತಂದು ಕೊಡುವಲ್ಲಿ ಜಾನಪದ ಲೋಕದ ಕೊಡುಗೆ ದೊಡ್ಡದು’ ಎಂದರು.
ತಂಬೂರಿ ಕಲಾವಿದ ರಾಮನಗರ ತಾಲ್ಲೂಕಿನ ಹನುಮಂತೇಗೌಡನದೊಡ್ಡಿಯ ಶಿವಣ್ಣ ಅವರಿಗೆ ಗಣ್ಯರು ಸನ್ಮಾನ ಮಾಡಿದರು. ಬಳಿಕ, ಶಿವಣ್ಣ ಅವರು ಸಭಿಕರೊಂದಿಗೆ ಸಂವಾದ ನಡೆಸಿ, ತಮ್ಮ ಕಲಾ ಬದುಕನ್ನು ಹಂಚಿಕೊಂಡರು.
ಬಳಿಕ ಶಿವಣ್ಣ ಅವರು ತಮ್ಮ ತಂಡದೊಂದಿಗೆ ಮಂಟೇಸ್ವಾಮಿಯ ಕುರಿತ ಬಸವಣ್ಣನ ಸಾಲು, ಮಲೆಮಹದೇಶ್ವರ, ನಂಜುಂಡೇಶ್ವರ, ಬೆಳ್ಳಿಬೆಟ್ಟದ ಒಡೆಯ ಬಿಳಿಗಿರಿರಂಗನಾಥ, ಬೇವಿನಹಟ್ಟಿ ಕಾಳಮ್ಮ, ನೀಲವೇಣಿ ಪವಾಡ, ಗಂಗೆ-ಗೌರಿ ಕಥೆಗಳನ್ನು ಹಾಡಿದರು. ಅವರಿಗೆ ಪತ್ನಿ ಗೌರಮ್ಮ, ಸುರೇಶ್ ಕೆ.ಎಂ ಹಾಗೂ ಪ್ರತಾಪ್ ಸಾಥ್ ನೀಡಿದರು.
ಬೆಂಗಳೂರು ಕಾಲೇಜ್ ಆಫ್ ಎಜುಕೇಷನ್ ಪ್ರಾಂಶುಪಾಲ ಡಾ. ಸುಬ್ರಮಣಿ ಸಿ.ಎಸ್, ಪರಿಷತ್ತಿನ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಸು.ತಾ. ರಾಮೇಗೌಡ ಇದ್ದರು. ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಸರಸವಾಣಿ ಸ್ವಾಗತಿಸಿದರು. ಕ್ಯೂರೇಟರ್ ಡಾ. ರವಿ ಯು.ಎಂ ಸಂವಾದ ನಡೆಸಿ ಕೊಟ್ಟರು. ರಂಗ ಸಹಾಯಕ ಪ್ರದೀಪ್ ನಿರೂಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.