ADVERTISEMENT

ಒಬ್ಬ ಸಾವು; 10 ಮಂದಿಗೆ ಗಾಯ

ರಸ್ತೆ ವಿಭಜಕ ಹಾರಿ ಪಲ್ಟಿಯಾಗಿ 2 ವಾಹನಕ್ಕೆ ಗುದ್ದಿದ ಕಾರು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 17:01 IST
Last Updated 15 ಏಪ್ರಿಲ್ 2025, 17:01 IST
ಚನ್ನಪಟ್ಟಣ ತಾಲ್ಲೂಕಿನ ಲಂಬಾಣಿ ತಾಂಡ್ಯ ಬಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು
ಚನ್ನಪಟ್ಟಣ ತಾಲ್ಲೂಕಿನ ಲಂಬಾಣಿ ತಾಂಡ್ಯ ಬಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕಾರು   

ಚನ್ನಪಟ್ಟಣ: ತಾಲ್ಲೂಕಿನ ಲಂಬಾಣಿ ತಾಂಡ್ಯ ಗ್ರಾಮದ ಬಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಮಂಗಳವಾರ ರಾತ್ರಿ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಎರಡು ಕಾರುಗಳಿಗೆ ಗುದ್ದಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳ ಗುರುತು ಪತ್ತೆಯಾಗಿಲ್ಲ.

ಬೆಂಗಳೂರಿನಿಂದ ಮೈಸೂರು ಕಡೆಗೆ ವೇಗವಾಗಿ ಬರುತ್ತಿದ್ದ ಕೇರಳದ ಹೋಂಡಾ ಸಿವಿಕ್ ಕಾರಿನ ಚಾಲಕ, ಲಂಬಾಣಿ ತಾಂಡ್ಯದ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕದ ಮೇಲೆ ಹತ್ತಿಸಿದ್ದಾನೆ. ವೇಗದ ತೀವ್ರತೆಗೆ ಕಾರು ಪಲ್ಟಿಯಾಗಿ ಪಕ್ಕದ ರಸ್ತೆಗೆ ಜಿಗಿದು, ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಡಿಸೈರ್ ಮತ್ತು ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾಗನರ್ ಕಾರಿನಲ್ಲಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೂರೂ ಕಾರುಗಳಲ್ಲಿದ್ದ 10 ಮಂದಿಗೆ ಗಾಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ, ಸ್ಥಳೀಯರ ನೆರವಿನಿಂದ ಆಂಬುಲೆನ್ಸ್‌ನಲ್ಲಿ ಶವ ಹಾಗೂ ಗಾಯಾಳುಗಳನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನು ಬೇರೆ ಆಸ್ಪತ್ರೆಗಳಿಗೆ ಕಳಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ADVERTISEMENT

ಘಟನೆಯಿಂದಾಗಿ ನಜ್ಜುಗುಜ್ಜಾಗಿ ರಸ್ತೆ ಮಧ್ಯೆ ನಿಂತಿದ್ದ ಕಾರುಗಳಿಂದಾಗಿ, ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಕೆಲ ಹೊತ್ತು ತೊಂದರೆಯಾಯಿತು. ನಂತರ ಕಾರುಗಳನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮೃತರು ಹಾಗೂ ಗಾಯಾಳುಗಳ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.