ADVERTISEMENT

‘ಸತತ ಪ್ರಯತ್ನದಿಂದ ಸಾಧನೆ ಸಾಧ್ಯ’

ನೀಟ್–2024 ತರಬೇತಿ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 16:24 IST
Last Updated 6 ಜುಲೈ 2023, 16:24 IST
ರಾಮನಗರದ ಕನಕಪುರ ರಸ್ತೆಯಲ್ಲಿರುವ ಶಾಂತಿನಿಕೇತನ ಮೆಡಿಕಲ್ ಅಕಾಡೆಮಿಯಲ್ಲಿ ಗುರುವಾರ
ರಾಮನಗರದ ಕನಕಪುರ ರಸ್ತೆಯಲ್ಲಿರುವ ಶಾಂತಿನಿಕೇತನ ಮೆಡಿಕಲ್ ಅಕಾಡೆಮಿಯಲ್ಲಿ ಗುರುವಾರ    

ರಾಮನಗರ: ‘ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಹಾಗೂ ವಿಧೇಯತೆಯನ್ನು ಮೈಗೂಡಿಸಿಕೊಂಡರೆ, ಸಾಧನೆ ಸಾಧ್ಯ. ತಂದೆ- ತಾಯಿ ಮತ್ತು ಗುರು- ಹಿರಿಯರಿಗೆ ವಿಧೇಯರಾಗಿರಬೇಕು. ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಪದ್ಮಾ ಹೇಳಿದರು.

ನಗರದ ಕನಕಪುರ ರಸ್ತೆಯಲ್ಲಿರುವ ಶಾಂತಿ‌ನಿಕೇತನ ರೆಸಿಡೆನ್ಸಿಯಲ್ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಮೆಡಿಕಲ್ ಅಕಾಡೆಮಿಯಲ್ಲಿ ಗುರುವಾರ ನಡೆದ ನೀಟ್-2024 ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಮನಗರದಲ್ಲಿ ಮೊದಲ ಬಾರಿಗೆ ಇಂಟಿಗ್ರೇಟೆಡ್ ಕೋರ್ಸ್ ಜೊತೆಗೆ ನೀಟ್ ತರಬೇತಿ ಆರಂಭಿಸಿರುವುದು ಶ್ಲಾಘನೀಯ. ಇದರಿಂದಾಗಿ, ಇಲ್ಲಿನ ಮಕ್ಕಳು ಬೆಂಗಳೂರು ಮತ್ತು ಮೈಸೂರಿಗೆ ತರಬೇತಿಗಾಗಿ ಹೋಗಬೇಕಾದ ಅನಿವಾರ್ಯತೆ ತಪ್ಪಿದೆ‌. ಆನ್‌ಲೈನ್‌ಗಿಂತ ಆಫ್‌ಲೈನ್ ತರಬೇತಿ ಪರಿಣಾಮಕಾರಿ. ವಿದ್ಯಾರ್ಥಿಗಳು ಚನ್ನಾಗಿ ಓದಿದರೆ, ಉನ್ನತ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಡೊನೇಷನ್ ಕೊಡುವುದು ತಪ್ಪಲಿದೆ’ ಎಂದರು.

ADVERTISEMENT

ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್. ಕುಮಾರಸ್ವಾಮಿ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಮುಂದೆ ಏನಾಗಬೇಕು ಎಂಬ ಗುರಿಯೊಂದಿಗೆ ಮುನ್ನುಗ್ಗಬೇಕು. ನಮ್ಮ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದರೂ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದುಳಿಯುತ್ತಿದ್ದಾರೆ. ಸೂಕ್ತ ತರಬೇತಿ ಕೊರತೆ‌ ಇದಕ್ಕೆ ಕಾರಣ. ಅದನ್ನು ‌ನೀಗಿಸಲು ಸಂಸ್ಥೆಯಲ್ಲಿ ಇಂಟಿಗ್ರೇಟೆಡ್ ತರಬೇತಿ ಆರಂಭಿಸಲಾಗಿದೆ’ ಎಂದರು.

ಸಂಸ್ಥೆಯ ಸಿಇಒ ಕೆ.ವಿ.ವಿ. ಸಾಂಭಾಶಿವ ಮಾತನಾಡಿ, ‘ಅಕಾಡೆಮಿಯಲ್ಲಿ ನೀಟ್ ಪರೀಕ್ಷೆಗಾಗಿ ದೀರ್ಘಕಾಲೀನ, ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ವಸತಿ ಸಹಿತ ತಲಾ 60 ಮಂದಿಯ ಬ್ಯಾಚ್ ಗಳನ್ನು ಆರಂಭಿಸಲಾಗಿದೆ. ನೀಟ್ ಮತ್ತು ಜೆಇಇ ತರಬೇತಿಯು ವಿದ್ಯಾರ್ಥಿಗಳು ಡೊನೇಷನ್ ಇಲ್ಲದೆ ಸೀಟು ಪಡೆಯುವಂತೆ ಮಾಡುತ್ತದೆ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ದಿಲೀಪ್ ಸಿ.ಎಂ, ಸಂಸ್ಥೆಯ ಸಂಯೋಜಕ ನಾರಾಯಣ್ ಟಿ.ವಿ ಇದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪರ್ವೀನ್ ಬಾನು ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.