ADVERTISEMENT

ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:29 IST
Last Updated 17 ಜೂನ್ 2019, 14:29 IST
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಬೆಸ್ಕಾಂ ಕಚೇರಿಯಲ್ಲಿ ನಡೆದ ವಿದ್ಯುತ್ ಗ್ರಾಹಕರ ಸಂವಾದ ಸಭೆಯಲ್ಲಿ ಎಇಇ ಚಿದಾನಂದ್ ಮಾತನಾಡಿದರು
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಬೆಸ್ಕಾಂ ಕಚೇರಿಯಲ್ಲಿ ನಡೆದ ವಿದ್ಯುತ್ ಗ್ರಾಹಕರ ಸಂವಾದ ಸಭೆಯಲ್ಲಿ ಎಇಇ ಚಿದಾನಂದ್ ಮಾತನಾಡಿದರು   

ಚನ್ನಪಟ್ಟಣ: ‘ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ರಾಮನಗರ ಬೆಸ್ಕಾಂ ರಾಮನಗರ ವಿಭಾಗದ ಎಇಇ ಚಿದಾನಂದ್ ಹೇಳಿದರು.

ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಬೆಸ್ಕಾಂ ವತಿಯಿಂದ ಶನಿವಾರ ನಡೆದ ವಿದ್ಯುತ್ ಗ್ರಾಹಕರ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಅನುಕೂಲ ಮಾಡಿಕೊಡುವುದು ಬೆಸ್ಕಾಂನ ಕರ್ತವ್ಯ. ಯಾವುದೇ ರೀತಿಯಲ್ಲೂ ರೈತರಿಗೆ ತೊಂದರೆ ಕೊಡುವುದಿಲ್ಲ’ ಎಂದರು.

‘ರೈತರ ಅನುಕೂಲಕ್ಕಾಗಿ ತಿಂಗಳ ಮೂರನೇ ಶನಿವಾರ ಬೆಸ್ಕಾಂ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಲಾಗುವುದು. ರೈತರು ಹಾಗೂ ಸಾರ್ವಜನಿಕರು ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ನಿವೇದನೆ ಮಾಡಿಕೊಳ್ಳಬಹುದು. ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಸಭೆಯಲ್ಲಿ ಹಾಜರಿದ್ದ ರೈತಸಂಘದ ಮುಖಂಡರು ಮಾತನಾಡಿ, ‘ರಾತ್ರಿ ವೇಳೆ ಅನಗತ್ಯವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದು ಸರಿಯಲ್ಲ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ. ರಾತ್ರಿಯ ವೇಳೆ ವಿದ್ಯುತ್ ಇದ್ದರೆ ಬೆಳಕು ಇರುವ ಕಡೆ ಪ್ರಾಣಿಗಳು ಬರುವುದಿಲ್ಲ. ಬೆಳೆಗಳ ನಾಶವನ್ನು ತಡೆಯಬಹುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಚಿದಾನಂದ್ ಅವರು, ‘ಆದಷ್ಟು ರಾತ್ರಿಯ ವೇಳೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುವುದು. ರೈತರು ಇದರ ಬಗ್ಗೆ ಯಾವುದೇ ಬೇಸರಪಟ್ಟುಕೊಳ್ಳುವುದು ಬೇಡ’ ಎಂದರು.

ಸಭೆಯಲ್ಲಿ ಕೋಡಂಬಹಳ್ಳಿ ಶಾಖಾಧಿಕಾರಿ ಹೇಮಾಕ್ಷ, ಸರಗೂರು ಶಾಖಾಧಿಕಾರಿ ಜಯರಾಮು, ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮೇಗೌಡ, ರೈತಮುಖಂಡರಾದ ರಾಜಣ್ಣ, ವೆಂಕಟೇಶ್, ಕೆ.ಎಸ್.ನಾಗರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.