ADVERTISEMENT

ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬರಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 13:29 IST
Last Updated 11 ಜೂನ್ 2019, 13:29 IST
ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು   

ಚನ್ನಪಟ್ಟಣ: ‘ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ಹೇಳಿದರು.

ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಸೋಮವಾರ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚಾಗಿದೆ. ಸೂಕ್ತ ಮಾರ್ಗದರ್ಶನವನ್ನು ಶಿಕ್ಷಣದ ಮೂಲಕ ನೀಡಿದಾಗ ಮಕ್ಕಳು ಉನ್ನತ ಮಟ್ಟಕ್ಕೆ ಸಾಗುತ್ತಾರೆ. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ’ ಎಂದರು.

ADVERTISEMENT

ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಮಾತನಾಡಿ ‘ಮಕ್ಕಳು ಉತ್ತಮ ಶಿಕ್ಷಣ ಪಡೆಯುವಲ್ಲಿ ಪೋಷಕರ ಪಾತ್ರ ಮಹತ್ತರವಾದುದು. ಪೋಷಕರು ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು’ ಎಂದು ಹೇಳಿದರು.

ಬಿ.ಎಸ್.ಎನ್.ಎಲ್.ನಿವೃತ್ತ ಅಧಿಕಾರಿ ವೆಂಕಟಾಚಲಯ್ಯ ಮಾತನಾಡಿ ‘ಮಕ್ಕಳು ಶಿಸ್ತನ್ನು ಮೈಗೂಡಿಸಿಕೊಂಡಾಗ ಜ್ಞಾನದ ಅರಿವು ವಿಸ್ತಾರಗೊಳ್ಳುತ್ತದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.

ಮಕ್ಕಳಿಗೆ ನೋಟ್ ಬುಕ್, ಬ್ಯಾಗ್, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.ಮುಖ್ಯ ಶಿಕ್ಷಕಿ ಯಶೋಧಮ್ಮ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಕೆಂಪರಾಜು, ಶಿಕ್ಷಕ ಎ.ಜಿ.ಜಯರಾಂ, ಗ್ರಾಮದ ಮುಖಂಡರಾದ ವೆಂಕಟರಮಣಯ್ಯ, ಮುನಿಯಪ್ಪ, ನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟರಾಮು, ಲಕ್ಷ್ಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುಬ್ಬಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.