ADVERTISEMENT

ಆಸ್ತಿ ಮಾರಾಟ ಯತ್ನ: ಕ್ರಮಕ್ಕೆ ಆಗ್ರಹ

ಅಗ್ರಿಗೋಲ್ಡ್‌ ಕಂಪನಿ ವಂಚಿತ ಗ್ರಾಹಕರು, ಏಜೆಂಟರಿಂದ ಉಪವಿಭಾಗಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 14:10 IST
Last Updated 4 ಅಕ್ಟೋಬರ್ 2018, 14:10 IST
ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟ್‌ಗಳ ಕಲ್ಯಾಣ ಸಂಘದ ಸದಸ್ಯರು ರಾಮನಗರ ಮಿನಿವಿಧಾನಸೌಧದ ಮುಂಭಾಗ ಧರಣಿ ಕುಳಿತರು
ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟ್‌ಗಳ ಕಲ್ಯಾಣ ಸಂಘದ ಸದಸ್ಯರು ರಾಮನಗರ ಮಿನಿವಿಧಾನಸೌಧದ ಮುಂಭಾಗ ಧರಣಿ ಕುಳಿತರು   

ರಾಮನಗರ: ಅಗ್ರಿಗೋಲ್ಡ್‌ ಕಂಪನಿಯ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟ್‌ಗಳ ಕಲ್ಯಾಣ ಸಂಘದ ಸದಸ್ಯರು ಗುರುವಾರ ಇಲ್ಲಿನ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

‘ ಅಗ್ರಿಗೋಲ್ಡ್ ಕಂಪನಿ ವಂಚನೆಯಲ್ಲಿ ರಾಜ್ಯದ 8.5 ಲಕ್ಷ ಗ್ರಾಹಕರು ಸುಮಾರು ₨2 ಸಾವಿರ ಕೋಟಿ ಹಣ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರವೇ ಅಗ್ರಿಗೋಲ್ಡ್ ಕಂಪನಿಗೆ ಸೇರಿದ ಸುಮಾರು 670 ಎಕರೆ ಜಮೀನನ್ನು ಗುರುತಿಸಿ, ಅದರ ವಶಕ್ಕೆ ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿದೆ. ಹೀಗಿರುವಾಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಬೆಳವಾಡಿ ಬಳಿ ಇರುವ ಆಸ್ತಿಯನ್ನು ಕಂಪನಿಯವರು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ’ ಎಂದು ಸಂಘಟನೆಯ ಅಧ್ಯಕ್ಷ ಆಂಡಾಲು ರಮೇಶ್ ಬಾಬು ಆರೋಪಿಸಿದರು.

‘ಈ ನಡುವೆ ಮಂಗಳೂರಿನ ಕೀನ್ಯ ಮತ್ತು ತಲಪಾಡಿ ಬಳಿ ಇರುವ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಲ್ಲಿ ಮಾರಾಟ ಮಾಡಲು ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ದಿನಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇವುಗಳ ಬಗ್ಗೆ ಸಮರ್ಪಕ ಉತ್ತರ ನೀಡದೇ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕಂಪನಿಯವರು ಆಸ್ತಿಯನ್ನು ಅಕ್ರಮವಾಗಿ ಮತ್ತೆ ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ, ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ಅಗ್ರಿಗೋಲ್ಡ್ ಕಂಪನಿ ಆಸ್ತಿಗಳ ಕಾನೂನಾತ್ಮಕ ನಿರ್ವಹಣೆಗಾಗಿ ನೇಮಕಗೊಂಡಿರುವ ರಾಮನಗರದ ಉಪವಿಭಾಗಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜ್ಯದಲ್ಲಿ ಸುಮಾರು 8.5 ಲಕ್ಷ ಗ್ರಾಹಕರು ಕಂಪನಿಯಿಂದ ವಂಚನೆಗೆ ಒಳಗಾಗಿದ್ದಾರೆ. ಆದರೆ ಇವರಲ್ಲಿ ಶೇ ಶೇ.30ರಷ್ಟು ಗ್ರಾಹಕರ ಹೆಸರು ಸಿಐಡಿ ವೆಬ್‌ಸೈಟ್‌ನಲ್ಲಿ ಇಲ್ಲ. ಆಂಧ್ರ ಪ್ರದೇಶ ಮಾದರಿಯಲ್ಲಿಯೇ ಕರ್ನಾಟಕ ಸರ್ಕಾರವೂ ಸಹ ಹೆಸರು ಬಿಟ್ಟುಹೋಗಿರುವ ಗ್ರಾಹಕರ ವಿವರ ಸಂಗ್ರಹಣೆಗೆ ಮುಂದಾಗಬೇಕು. ಅಗ್ರಿಗೋಲ್ಡ್‌ ಕಂಪನಿಯಿಂದ ವಂಚನೆಗೆ ಒಳಗಾಗಿ ಮೃತಪಟ್ಟ ಕುಟುಂಬಗಳಿಗೆ ₨5 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಗುರುವಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಬಿ.ಶೆಟ್ಟಿ, ಸಿದ್ದರಾಮೇಗೌಡ, ಎನ್.ಮಾರುತಿ, ರಾಜನ್, ಮಂಜುನಾಥ್, ವೆಂಕಟರಮಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.