ADVERTISEMENT

‘ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು’

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಮುಲ್ಲೈ ಮುಹಿಲನ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 12:12 IST
Last Updated 3 ಜುಲೈ 2019, 12:12 IST
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ವಿದ್ಯಾರ್ಥಿಗಳು ಉದ್ಘಾಟಿಸಿದರು
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ವಿದ್ಯಾರ್ಥಿಗಳು ಉದ್ಘಾಟಿಸಿದರು   

ರಾಮನಗರ: ಎಲ್ಲರೂ ಜಾಗೃತರಾದಾಗ ಮಾತ್ರ ಬಾಲಕಾರ್ಮಿಕ ಎಂಬ ಪಿಡುಗನ್ನು ಹೋಗಲಾಡಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ದೇಶ ಅಭಿವೃದ್ಧಿಯಾಗಬೇಕಾದರೆ ಸಮಾಜದ ಎಲ್ಲ ವರ್ಗದ ಮಕ್ಕಳು ಶಿಕ್ಷಣವಂತರಾಗಬೇಕು. ಬಾಲ ಕಾರ್ಮಿಕ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಎಲ್ಲ ಇಲಾಖೆಗಳು ಒಟ್ಟುಗೂಡಿ ಶಿಕ್ಷಣದಿಂದ ವಂಚಿತ 14 ವರ್ಷದೊಳಗಿನ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಲು ಸಹಕರಿಸಬೇಕು. ನನ್ನ ನಡೆ ಶಾಲೆ ಕಡೆ ಎಂಬ ಘೋಷವಾಕ್ಯದಡಿ ಬಾಲಕಾರ್ಮಿಕ ಪದ್ಧತಿಗೆ ಒಳಪಟ್ಟಂತಹ ಮಕ್ಕಳ ಪೋಷಕರಿಗೆ ಮನವೊಲಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ತಿಳಿಸಿದರು.

ADVERTISEMENT

ದೇಶದಲ್ಲಿ 1.5 ಕೋಟಿಗೂ ಅಧಿಕ ಬಾಲಕಾರ್ಮಿಕರಿದ್ದಾರೆ. 20 ಕೋಟಿಗೂ ಹೆಚ್ಚು ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ನಿರುದ್ಯೋಗಿಗಳು ಮಾಡಬೇಕಾದ ಕೆಲಸವನ್ನು ಮಕ್ಕಳು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹೊರರಾಜ್ಯಗಳಿಂದ ವಲಸೆ ಬಂದವರ ಮಕ್ಕಳನ್ನು ಗುರುತಿಸಿ ಶಿಕ್ಷಣ ನೀಡಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಮಾತನಾಡಿ ಬಾಲಕಾರ್ಮಿಕ ಪದ್ಧತಿ ನೂರಾರು ವರ್ಷಗಳಿಂದ ರೂಢಿಯಲ್ಲಿರುವ ಸಾಮಾಜಿಕ ಪಿಡುಗಾಗಿದೆ. ಇದು ವಾಸಿ ಮಾಡದ ಗಾಯದಂತೆ ಬೆಳೆಯುತ್ತಿದೆ. ಈ ಗಾಯಕ್ಕೆ ಶಿಕ್ಷಣದಿಂದ ಮಾತ್ರ ಪರಿಹಾರ. ಹೀಗಾಗಿ ಯಾವುದೇ ಮತ, ಪಥ, ವರ್ಗ, ಕನಿಷ್ಠ, ಗರಿಷ್ಠ ಎನ್ನದೇ ಈ ಪಿಡುಗಿಗೆ ಬಲಿಯಾದವರನ್ನು ರಕ್ಷಿಸಿ ಉತ್ತಮ ಶಿಕ್ಷಣವಂತರನ್ನಾಗಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಮಕ್ಕಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳದೇ ಸಾಧಕರ ದಾರಿಯಲ್ಲಿ ಸಾಗಿ ಉತ್ತಮ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ತಿಳಿಸಿದರು.

ಕೆಳಸ್ಥರದಲ್ಲಿ ಇರುವಂತಹ ಹಾಗೂ ಶಿಕ್ಷಣದಿಂದ ವಂಚಿತ ಮಕ್ಕಳ ರಕ್ಷಣೆ, ಕೇವಲ ದಿನಾಚರಣೆಗಳಿಗೆ ಮಾತ್ರ ಸೀಮಿತ ಆಗಬಾರದು. ಜಿಲ್ಲಾಡಳಿತದ ನೇತೃತ್ವದಲ್ಲಿ ಎಲ್ಲ ಇಲಾಖೆಗಳು ಸೇರಿ ವರ್ಷದ 365 ದಿನಗಳೂ ಕೂಡ ಕಾರ್ಯಪ್ರವೃತ್ತರಾಗಿ ಇಂತಹ ಕೆಟ್ಟ ಪದ್ಧತಿಗೆ ಒಳಗಾದ ಮಕ್ಕಳನ್ನು ರಕ್ಷಿಸಬೇಕು. ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲೀಕರಿಗೆ, ಸಹಕರಿಸಿದ ಪಾಲಕರಿಗೆ ದಂಡ ಹಾಗೂ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ವಿವಿಧ ಶಾಲೆಗಳ ಮಕ್ಕಳಿಂದ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಜಾಥಾ ಕಾರ್ಯಕ್ರಮ ನಡೆಯಿತು. ಗಾಯಕ ಶ್ರೀನಿವಾಸ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ ಇದ್ದರು. ವಿದ್ಯಾರ್ಥಿ ಲಕ್ಷ್ಮೀಶ ಪ್ರಾರ್ಥಿಸಿದರು. ಕಾರ್ಮಿಕ ಅಧಿಕಾರಿ ಶೇಖರ್ ಎಸ್. ಗಡದ್ ಸ್ವಾಗತಿಸಿದರು. ಬಿ.ಆರ್. ದಿನೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಗೋವಿಂದಸ್ವಾಮಿ ನಿರೂಪಿಸಿದರು. ಯು. ಯತೀಶ್ ಕುಮಾರ್ ವಂದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಸರ್ಕಾರೇತರ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

**
ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕು. ಯಾರಾದರೂ ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ 1098 ಗೆ ಕರೆ ಮಾಡಿ ಮಾಹಿತಿ ನೀಡಿ
– ಎಂ.ಪಿ. ಮುಲ್ಲೈ ಮುಹಿಲನ್‌,ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.