ADVERTISEMENT

ಕಲೆ, ಕಲಾವಿದರ ಉಳಿಸುವವರ ಸಂಖ್ಯೆ ಕ್ಷೀಣ

ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ದೊಡ್ಡಾಟ ಕತೆಗಾರ ಬಸವರಾಜ ಶಿಗ್ಗಾವಿ ಬೇಸರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 13:20 IST
Last Updated 2 ಜೂನ್ 2019, 13:20 IST
ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ದೊಡ್ಡಾಟ ಕತೆಗಾರ ಬಸವರಾಜ ಶಿಗ್ಗಾವಿ ಅವರನ್ನು ಸನ್ಮಾನಿಸಲಾಯಿತು
ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ದೊಡ್ಡಾಟ ಕತೆಗಾರ ಬಸವರಾಜ ಶಿಗ್ಗಾವಿ ಅವರನ್ನು ಸನ್ಮಾನಿಸಲಾಯಿತು   

ರಾಮನಗರ: ಸಮಾಜದ ಡೊಂಕು ತಿದ್ದಲು ಕಲೆ ಬಳಕೆಯಾಗುತ್ತದೆ. ಆದರೆ, ಕಲೆ ಉಳಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಶಿಗ್ಗಾವಿ ತಾಲ್ಲೂಕಿನ ಕ್ಯಾರಿಕೊಂಡ ಗ್ರಾಮದ ದೊಡ್ಡಾಟ ಕತೆಗಾರ ಬಸವರಾಜ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕೃಷ್ಣಾಪುರದೊಡ್ಡಿ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್‌ನಿಂದ ಶನಿವಾರ ನಡೆದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲೆ ಪ್ರೋತ್ಸಾಹಿಸಿದಾಗ ಪಾರಂಪರಿಕ ಕಲೆ ಉಳಿದು, ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

‘ಶ್ರೇಷ್ಠ ಕಲೆ ದೊಡ್ಡಾಟ. ಓದು, ಬರಹ ಕಲಿತ ಪದವೀಧರರು, ವಿದ್ಯಾವಂತರು ಕಲಿಯುವ ಮೂಲಕ ಪುನಶ್ಚೇತನಕ್ಕೆ ಮುಂದಾಗಬೇಕು. ಇದುವರೆಗೂ ನೂರಾರು ದೊಡ್ಡಾಟ ಪ್ರದರ್ಶನ ಕಾರ್ಯಕ್ರಮ ನೀಡಿದ್ದು, ಈ ಕಲೆ ನಶಿಸಿ ಹೋಗಬಾರದು ಎಂಬ ಕಳಕಳಿಯಿಂದಾಗಿ ಉತ್ತಮವಾದ ಶಿಷ್ಯ ಬಳಗ ಬೆಳೆಸಿದ್ದೇನೆ. ಆ ಮೂಲಕ ವಿದ್ಯಾವಂತ ವರ್ಗವನ್ನು ಪ್ರೇರೇಪಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಉತ್ತರ ಕರ್ನಾಟಕ ಭಾಗದ ದೊಡ್ಡಾಟಕ್ಕೆ ತನ್ನದೆ ಸ್ವರೂಪವಿದೆ. ಇಂತಹ ವಿಶೇಷ ಕಲೆ ಉಳಿಸುವಲ್ಲಿ ಕಲಾವಿದರ ಪಾತ್ರ ಗಣನೀಯವಾಗಿದೆ. ಕಲಾವಿದರ ಪ್ರತಿಭೆ ದಾಖಲೀಕರಿಸಬೇಕು. ಅಪ್ಪಟ ದೇಸಿ ಕಲೆಯಾದ ದೊಡ್ಡಾಟ ರಂಗಭೂಮಿಯಲ್ಲಿ ಜೀವಂತವಾಗಿದೆ ಎಂದು ಹೇಳಿದರು.

ಅನೇಕ ತಜ್ಞರು ಭರತ ನಾಟ್ಯಶಾಸ್ತ್ರ ಅಧ್ಯ­ಯನ ಮಾಡಿ ಅನೇಕ ಕಲಾಪ್ರಕರಗಳನ್ನು ಹೊರತರುವಲ್ಲಿ ಯಶಸ್ವಿಯಾಗುವುದಿಲ್ಲ. ಆದರೆ, ಅನಕ್ಷರಸ್ಥ ಜನರು ತಮ್ಮ ಜೀವನ ಅನುಭವ­ಗಳನ್ನು ದೊಡ್ಡಾಟ, ಬಯಲಾಟದಲ್ಲಿ ತೊಡಗಿಸಿ­ಕೊಂಡು ಅನೇಕ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡುತ್ತಾರೆ. ಕಲಾವಿದರ ಸೋಗು ಹಾಕಿಕೊಂಡ ಅನೇಕರು ಸರ್ಕಾರದ ಮುಂದೆ ಭಿಕ್ಷುಕರಂತೆ ಅನುದಾನ ಬೇಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೊಡ್ಡಾಟ ಕಲಾವಿದರು ತಾವು ಕೂಡಿಟ್ಟ ಹಣದಲ್ಲಿಯೇ ಬಯಲಾಟ ಆಡಿ ಖುಷಿ ಪಡುತ್ತಾರೆ. ಕಲೆಯಿಂದಾಗಿ ಸಹನೆ ಗುಣ ಬೆಳೆಯುತ್ತದೆ. ಇಲ್ಲಿ ಆಯ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮದಾದರೆ ಕಲೆ ಉಳಿಯುತ್ತದೆ. ದೊಡ್ಡಾಟ ಕಲೆ ಉಳಿವಿಗೆ ನಿರಂತರವಾಗಿ ಕಲಾಸಕ್ತರು ಪ್ರಾಮಾಣಿಕವಾದ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.

ಯುವ ಸಮುದಾಯ ಮೊಬೈಲ್, ಟಿವಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ತಲ್ಲೀನರಾಗಿ ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರೂ ಯುವ ಸಮುದಾಯ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು ಎಂದು ಮನವಿ ಮಾಡಿದರು.

ಜನಪದ ಹಿರಿಯ ಗಾಯಕ ಚಿಕ್ಕಮರಿಗೌಡ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ಜನಪದ ಗೀತೆಗಳ ಮೂಲ ದಾಟಿ ಮರೆಯಾಗುತ್ತಿದ್ದು ಅವುಗಳನ್ನು ಉಳಿಸಲು ಪ್ರಯತ್ನಿಸಬೇಕಾಗಿದೆ. ಕೆಲವರು ಮೂಲ ಜನಪದ ದಾಟಿಗಳನ್ನು ಚಲನಚಿತ್ರಗಳಲ್ಲಿ ಬಳಸಿಕೊಂಡು ಸ್ವತಂತ್ರ ಗೀತೆಗಳನ್ನು ರಚಿಸುತ್ತಿದ್ದಾರೆ. ಇನ್ನೂ ಕೆಲವರು ಜನಪದ ದಾಟಿಯಲ್ಲಿ ಸ್ವರವಿತ ಕವನಗಳನ್ನು ಪ್ರಚಾರ ಮಾಡುತ್ತಿದ್ದು ಜನರಿಗೆ ಯಾವುದು ಮೂಲ ಜಾನಪದ, ಯಾವುದು ಜಾನಪದವಲ್ಲ ಎಂಬ ಬಗೆಗೆ ಗೊಂದಲ ಉಂಟಾಗುತ್ತಿದೆ. ಇಂಥ ಗೊಂದಲಗಳಿಂದ ಯುವ ಸಮುದಾಯ ಹೊರತರಲು ಮೂಲ ಜನಪದ ಗೀತೆಗಳನ್ನು ಹೆಚ್ಚು ಪ್ರಚಾರಕ್ಕೆ ತರುವ ಅಗತ್ಯವಿದೆ ಎಂದರು.

ಹೋಮಿಯೋಪತಿ ವೈದ್ಯ ಡಾ. ಸತೀಶ್ ಮಾತನಾಡಿ, ಸಂಗೀತ ಕೇಳುವ ಅಭ್ಯಾಸ ಬೆಳೆಸಿಕೊಂಡರೆ ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಒತ್ತಡಗಳಿಂದ ಮುಕ್ತರಾಗಲು ಎಲ್ಲರಿಗೂ ಸಂಗೀತದ ಅವಶ್ಯ ಇದೆ ಎಂದು ತಿಳಿಸಿದರು.

ದೊಡ್ಡಾಟ ಕಲಾವಿದರಾದ ವೀರೇಶ್ ಬಡಿಗೇರ್, ಮಲ್ಲೇಶಪ್ಪ ತಡಸದ, ಹೇಮಂತ್ ಕುಮಾರ್ ಭಜಂತ್ರಿ, ಕನಕಪ್ಪ, ಬಗರಿಕರ್, ಮಲ್ಲೇಶ್, ನೀಲಗುರಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆ.ಕಾಳಯ್ಯ, ಉಪನ್ಯಾಸಕ ಕೆ.ಎಸ್.ಧನಂಜಯ, ಶಿಕ್ಷಕರಾದ ನೆ.ರ. ಪ್ರಭಾಕರ್, ಎಂ.ಎಚ್.ಚನ್ನವೀರಪ್ಪ, ನೃತ್ಯ ಕಲಾವಿದೆ ಚಿತ್ರಾರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.