ಕನಕಪುರ: ಚಾಕನಹಳ್ಳಿ- ಅಳ್ಳಿಕೆರೆದೊಡ್ಡಿ ರಸ್ತೆಯಲ್ಲಿ ಭಾನುವಾರ ಟ್ರ್ಯಾಕ್ಟರ್ ಚಾಲಕ ಕೆರಳಾಳುಸಂದ್ರದ ಚಂದ್ರು ಎಂಬುವರ ಮೇಲೆ ಕಟ್ಟಿಗೆ ಪಟ್ಟಿ ಮತ್ತು ಇಟ್ಟಿಗೆಯಿಂದ ದಾಳಿ ಮಾಡಿದ ಅದೇ ಗ್ರಾಮದ ನಾಲ್ವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಕೆರಳಾಳುಸಂದ್ರದ ಚಂದ್ರು ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಅದೇ ಗ್ರಾಮದ ಶಿವಶಂಕರ, ಕೆಬ್ಬಳ್ಳಿ ರಾಜು, ಗೌಡಳ್ಳಿ ವಸಂತ, ಕಡವೆಕೆರೆದೊಡ್ಡಿ ವಿಕಾಸ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಕೊಲೆ ಉದ್ದೇಶದಿಂದಲೇ ಚಂದ್ರು, ಶಿವಸ್ವಾಮಿ ಮತ್ತು ಪುಟ್ಟಸ್ವಾಮಿ ಅವರ ಮೇಲೆ ಈ ನಾಲ್ವರು ಹಲ್ಲೆ ಮಾಡಿದ್ದಾರೆ ಎಂದು ಟ್ರ್ಯಾಕ್ಟರ್ ಮಾಲೀಕ ಗೌಡಳ್ಳಿ ಪುಟ್ಟಸ್ವಾಮಿ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ನಡೆದ ವಿಷಯ ತಿಳಿದು ಸ್ಥಳಕ್ಕೆ ಹೋದ ಚಂದ್ರು ಸಹೋದರ ಶಿವಸ್ವಾಮಿ ಮೇಲೆ ಚಾಕನಹಳ್ಳಿ ಬಳಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ನಂತರ ನನ್ನ ಮೇಲೂ ಹಲ್ಲೆ ಮಾಡಿದ್ದಾರೆ. ರಕ್ಷಣೆಗೆ ಬಂದ ಪತ್ನಿ ಸುಷ್ಮಾ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಟ್ರಾಕ್ಟರ ಮಾಲೀಕ ಗೌಡಳ್ಳಿ ಪುಟ್ಟಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.